ಹೊನ್ನಾವರ: ಮುರುಡೇಶ್ವರದ ಲಾಡ್ಜವೊಂದರಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆ ತಡೆಯುವಲ್ಲಿ ವಿಫಲವಾಗಿ ಅಮಾನತುಗೊಂಡಿದ್ದ ಪಿಎಸ್‌ಐ ಮಂಜುನಾಥ ಅವರಿಗೆ ಹೊನ್ನಾವರದಲ್ಲಿ ಅಧಿಕಾರದ ಭಾಗ್ಯ ದೊರೆತಿದೆ.
ಮಂಜುನಾಥ ಅವರ ಮೇಲೆ ಇಲಾಖಾ ವಿಚಾರಣೆ ಬಾಕಿಯಿರುವಾಗಲೇ ಹೊನ್ನಾವರದ ಪಿಎಸ್‌ಐ ಆಗಿ ಅಧಿಕಾರವಹಿಸಿಕೊಳ್ಳುವಂತೆ ದಿಡೀರ್ ಆದೇಶವಾಗಿದೆ. ಹೊನ್ನಾವರ ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ಮಹಾಂತೇಶ್ ನಾಯಕ ಅವರನ್ನು ಮಂಗಳೂರು ಐಜಿ ಕಚೇರಿಗೆ ವರ್ಗಾಯಿಸಲಾಗಿದೆ. ಅಮಾನತು ಆದ ಪಿಎಸ್‌ಐನ್ನು ಪಕ್ಕದ ಊರಿನ ಠಾಣೆಗೆ ವರ್ಗಾಯಿಸಿರುವ ಬಗ್ಗೆ ಅನುಮಾನ ಹಾಗೂ ಆಕ್ಷೇಪಗಳು ವ್ಯಕ್ತವಾಗಿದೆ.
ಅಕ್ರಮ ಅಡ್ಡೆ ಮೇಲೆ ಪೊಲೀಸ್ ದಾಳಿ
ಭಟ್ಕಳ: ಬಂದರು ರೋಡಿನ ಪ್ರಶಾಂತ ದೇವೇಂದ್ರ ನಾಯ್ಕ (42) ಹಾಗೂ ಮುರುಡೇಶ್ವರ ಸೋನಾರಕೇರಿಯ ಕೃಷ್ಣ ಮಾರಿ ನಾಯ್ಕ (54) ಎಂಬಾತರು ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸೆ 12ರ ಸಂಜೆ ಶಂಶುದ್ದಿನ್ ಸರ್ಕಲ್ ಬಳಿ ಪಿಎಸ್‌ಐ ನವೀನ ನಾಯ್ಕ ದಾಳಿ ನಡೆಸಿದಾಗ ಪ್ರಶಾಂತ ಬಳಿ 16800ರೂ ಸಿಕ್ಕಿದೆ. ಆತನ ಬಳಿಯಿದ್ದ ಜೂಜಾಟದ ಸಲಕರಣೆಗಳನ್ನು ಪೊಲೀಸರು ವಶಕ್ಕೆ ಪಡೆದರು. ಅದೇ ದಿನ ಮುರುಡೇಶ್ವರ ಪಿಎಸ್‌ಐ ಹಣಮಂತ ಬೀರಾದರ್ ಮುರುಡೇಶ್ವರ ಬೀದಿಯ ಗೂಡಂಗಡಿಯಲ್ಲಿ ಸರಾಯಿ ಮಾರಾಟ ಮಾಡುತ್ತಿದ್ದ ಕೃಷ್ಣ ನಾಯ್ಕರನ್ನು ವಶಕ್ಕೆ ಪಡೆದಿದ್ದು, ವಿವಿಧ ಬಗೆಯ ಮದ್ಯಗಳು ಸಿಕ್ಕಿವೆ.
ಬಾವಿಗೆ ಬಿದ್ದ ಮದ್ಯ ವ್ಯಸನಿ
ಕುಮಟಾ: ಮೂರುರು ಬೋಳಗುಡ್ಡೆಯ ಗೌರೀಶ ಮಂಜುನಾಥ ಹೆಗಡೆ (35) ಎಂಬಾತರ ಶವ ಪಕ್ಕದಮನೆ ಬಾವಿಯಲ್ಲಿ ಸಿಕ್ಕಿದೆ.
ಕೂಲಿ ಮಾಡಿ ಜೀವನ ನಡೆಸುತ್ತಿದ್ದ ಗೌರೀಶ್ ಸರಾಯಿ ಕುಡಿಯುವ ಚಟ ಹೊಂದಿದ್ದು, ಮನೆಗೆ ಸರಿಯಾಗಿ ಬರುತ್ತಿರಲಿಲ್ಲ. ಸೆ 10ರಂದು ಮನೆಯಿಂದ ಹೊರಹೋದ ಅವರನ್ನು ನಂತರ ಯಾರೂ ನೋಡಿಲ್ಲ. ಸೆ 12ರಂದು ಪಕ್ಕದ ಮನೆಯ ತೆರದ ಬಾವಿಯಲ್ಲಿ ಅವರ ಶವ ಕಾಣಿಸಿದೆ. ಕಾಲು ಜಾರಿ ಬಾವಿಗೆ ಬಿದ್ದು ಸಾವನಪ್ಪಿರುವ ಶಂಕೆಯಿರುವುದಾಗಿ ಅವರ ತಮ್ಮ ಗಣೇಶ ಮಂಜುನಾಥ ಹೆಗಡೆ ಪೊಲೀಸರಿಗೆ ತಿಳಿಸಿದ್ದಾರೆ.
ಮೆರವಣಿಗೆಯಲ್ಲಿ ಮರಣವಾದ ಮಾರುತಿ
ಭಟ್ಕಳ: ಗಣೇಶ ಮೂರ್ತಿ ವಿರ್ಸಜನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಾರುತಿ ಚೌಡಯ್ಯ ದೇವಾಡಿಗ (62) ಎಂಬಾತರು ಸಾವನಪ್ಪಿದ್ದಾರೆ.
ಮಾರುತಿ ಜನತಾ ಪತ್ತಿನ ಸಹಕಾರಿ ಸಂಘದ ನಿವೃತ್ತ ನೌಕರರಾಗಿದ್ದರು. ಬೇಂಗ್ರೆ ಮಾವಿನಕಟ್ಟಾದವರಾದ ಅವರು ಬುಧವಾರ ರಾತ್ರಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಹೂವಿನಮಾರುಕಟ್ಟೆಯ ಗುಡಿಗಾರರ ಮನೆ ಸಮೀಪ ಮೆರವಣಿಗೆ ಸಾಗುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಪ್ರತಿ ವರ್ಷ ವಿಶ್ವ ಹಿಂದೂ ಪರಿಷತ್ ಸ್ಥಾಪಿಸುವ ಗಣಪತಿ ವಿಗ್ರಹದ ಮೇಲ್ವಿಚಾರಣೆಯನ್ನು ಅವರು ನೋಡಿಕೊಳ್ಳುತ್ತಿದ್ದರು.