ಅಂಕೋಲಾ: ಪೂರ್ಣಪ್ರಜ್ಞ ಪಿಯು ಕಾಲೇಜಿನೊಳಗೆ ದಾಳಿ ನಡೆಸಿದ ಕಳ್ಳರು ಅಲ್ಲಿದ್ದ ಹಣ, ಸಿಸಿ ಕ್ಯಾಮರಾ ಹಾಗೂ ಮಕ್ಕಳ ಸಮವಸ್ತ್ರವನ್ನು ದೋಚಿ ಪರಾರಿಯಾಗಿದ್ದಾರೆ.
ಸೆ 11ರ ರಾತ್ರಿ ಈ ಕಳ್ಳತನ ನಡೆದಿರುವ ಅನುಮಾನವಿದ್ದು, ಸೆ 12ರಂದು ಕಾಲೇಜು ಬಾಗಿಲು ತೆಗೆದಾಗ ವಿಷಯ ಗೊತ್ತಾಗಿದೆ. ಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರು ಮೊದಲು ಶಿಕ್ಷಕರ ಕೊಠಡಿ ಪ್ರವೇಶಿಸಿದ್ದಾರೆ. ಅಲ್ಲಿನ ಕಪಾಟು ಮುರಿದು ಅದರಲ್ಲಿದ್ದ 18 ಸಾವಿರ ರೂ ಹಣವನ್ನು ಜೇಬಿಗಿಳಿಸಿದ್ದಾರೆ.
ಇದಾದ ನಂತರ ಆಡಳಿತ ಕಚೇರಿಗೆ ತೆರಳಿ ಅಲ್ಲಿದ್ದ ಸಿಸಿ ಟಿವಿ ಹಾಗೂ ಅದಕ್ಕೆ ಸಂಬoಧಿಸಿದ ಡಿವಿಆರ್ ಕದ್ದಿದ್ದಾರೆ. ಇದಾದ ಮೇಲೆ ಪ್ರಾಚಾರ್ಯರ ಕೊಠಡಿಗೆ ನುಗ್ಗಿ ಅಲ್ಲಿದ್ದ ಮಕ್ಕಳ ಸಮವಸ್ತ್ರ ಹಾಗೂ ವಿದ್ಯಾರ್ಥಿಗಳು ತುಂಬಿದ ಊಟ ಮತ್ತು ಶೈಕ್ಷಣಿಕ ಶುಲ್ಕ 1.70 ಲಕ್ಷ ರೂ ಅಪಹರಿಸಿದ್ದಾರೆ.




