ಕಾರವಾರ: ಬೈತಖೋಲದ ವಿಕ್ರಮ ಪಾಂಡುರoಗ ತಾಂಡೇಲ್ ಅವರಿಗೆ ಕಿಶೋರ ದುಮ್ಮ ತಾಂಡೇಲ ಹಾಗೂ ಸಂತೋಷ ದುಮ್ಮ ತಾಂಡೇಲ್ ಖುರ್ಚಿಯಿಂದ ಹೊಡೆದಿದ್ದಾರೆ. ಗಾಯಗೊಂಡ ವಿಕ್ರಮ ತಾಂಡೇಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸೆ 22ರಂದು ವಿಕ್ರಮ ತಾಂಡೇಲ್ ಜೈ ಗಣೇಶ ಬೋಟಿನ ಮೂಲಕ ಮೀನುಗಾರಿಕೆಗೆ ತೆರಳುತ್ತಿದ್ದರು. ಇದಕ್ಕಾಗಿ ಅವರು ಕಾರ್ಮಿಕರನ್ನು ಸಿದ್ಧಪಡಿಸಿದ್ದರು. ಸರಾಯಿ ನಶೆಯಲ್ಲಿದ್ದ ಸಂತೋಷ ತಾಂಡೇಲ್ ಬಳಿ ವಿಕ್ರಮ ತಾಂಡೇಲ್ `ತನ್ನ ಆಳುಗಳಿಗೆ ಯಾಕೆ ಸರಾಯಿ ಕುಡಿಸುತ್ತೀಯಾ?’ ಎಂದು ಪ್ರಶ್ನಿಸಿದರು. ಇದನ್ನು ಸಹಿಸದ ಸಂತೋಷ ತಾಂಡೇಲ್ `ಅದನ್ನು ಕೇಳಲು ನೀನು ಯಾರು? ಅವರು ಎಲ್ಲಿಂದಲೋ ಕುಡಿದು ಬಂದಿದ್ದಾರೆ. ನನಗೇನು ಕೇಳುತ್ತೀಯಾ?’ ಎಂದು ಪ್ರಶ್ನೆ ಮಾಡಿದ್ದು ಪರಸ್ಪರ ಜಗಳ ನಡೆಯಿತು.
ಆಗ ಸಂತೋಷನ ಅಣ್ಣ ಕಿಶೋರ್ ಜೋರಾಗಿ ಮಾತನಾಡಿ ಅಲ್ಲಿದ್ದ ಖುರ್ಚಿಯಿಂದ ವಿಕ್ರಮ ತಾಂಡೇಲರಿಗೆ ಹೊಡೆದಿದ್ದು, ಈ ವೇಳೆ ಸಂತೋಷ ಸಹ ಕೈ ಮುಷ್ಟಿಯಿಂದ ಕಣ್ಣಿಗೆ ಗುದ್ದಿದ್ದಾನೆ. ಇದಾದ ನಂತರ ಅಲ್ಲಿಯೇ ಬಿದ್ದಿದ ಗಾಜಿನ ಬಾಟಲಿ ತೆಗೆದುಕೊಂಡ ಸಂತೋಷ ವಿಕ್ರಮ ತಾಂಡೇಲರಿಗೆ ಅದನ್ನು ಚುಚ್ಚಲು ಮುನ್ನುಗ್ಗಿ ಬಂದಿದ್ದು, ಆಗ ವಿಕ್ರಮ ನೆಲಕ್ಕೆ ಬಿದ್ದಿದ್ದಾರೆ. ಇಬ್ಬರು ಆರೋಪಿತರು ಸೇರಿ ಆಗ ವಿಕ್ರಮರನ್ನು ಕಾಲಿನಿಂದ ತುಳಿದಿದ್ದು, ವಿಕ್ರಮರ ತಮ್ಮ ವಿಶ್ವನಾಥ ಆಗಮಿಸಿ ಜಗಳ ಬಿಡಿಸಿದ್ದಾರೆ.
ನಂತರ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಗಾಯಗೊಂಡ ವಿಕ್ರಮ ತಾಂಡೇಲ್ ಆಸ್ಪತ್ರೆಗೆ ದಾಖಲಾಗಿ ಪೊಲೀಸ್ ದೂರು ನೀಡಿದ್ದಾರೆ.