ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಉತ್ತರ ಕನ್ನಡ ಜಿಲ್ಲಾಡಳಿತ ವಿವಿಧ ಸ್ಪರ್ಧೆ ಆಯೋಜಿಸಿದೆ.
ಕಾರವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಜಿಲ್ಲೆಯಲ್ಲಿ ನಡೆಯುವ ವಿವಿಧ ಸ್ಪರ್ಧೆಗಳ ಕುರಿತು ಪೋಸ್ಟರ್ ಬಿಡುಗಡೆ ನಡೆಯಿತು. ಈ ವೇಳೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜಯಂತ್ ಹೆಚ್.ವಿ ಮಾತನಾಡಿ `ಜಿಲ್ಲೆಯಲ್ಲಿ ನೈಸರ್ಗಿಕ ವಿಕೋಪ ಸೇರಿದಂತೆ ಇತರೆ ಕಾರಣಗಳಿಂದ ಪ್ರವಾಸೋದ್ಯಮ ಕುಂಠಿತವಾಗಿತ್ತು. ಆದರೆ ಈಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚೇತರಿಕೆ ಕಾಣಲಾಗುತ್ತಿದೆ. ಜಿಲ್ಲೆಯಲ್ಲಿನ ಅನೇಕ ಪ್ರೇಕ್ಷಣೀಯ ಸ್ಥಳಗಳ ಜೊತೆ ಹಲವಾರು ಪುಣ್ಯಕ್ಷೇತ್ರಗಳಿಗೆ ಪ್ರವಾಸಿಗರನ್ನು ಆಕರ್ಷಿಸಿ, ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಸೆ 27ರಂದು ಬೆಳಗ್ಗೆ 11 ಗಂಟೆಗೆ ಕಾರವಾರದ ಅಜ್ವೀ ರೆಸ್ಟೋರೆಂಟ್ ಸಭಾಂಗಣದ ಚಿತ್ರಕಲೆ ಶಿಬಿರ, ಸೆ 28 ರಂದು ಮಧ್ಯಾಹ್ನ 4 ಗಂಟೆಗೆ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ಮರಳು ಶಿ¯್ಪ ಸ್ಪರ್ಧೆ ಹಾಗೂ ಸೆ 29ರಂದು ಮಧ್ಯಾಹ್ನ 4 ಗಂಟೆಗೆ ಗಾಳಿಪಟ ಸ್ಪರ್ಧೆ ನಡೆಯಲಿದೆ’ ಎಂದರು. `ಸೆ 30ರಂದು ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು’ ಎಂದರು.
`ಮರಳುಶಿಲ್ಪ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 10 ಸಾವಿರ, ದ್ವಿತೀಯ 8 ಸಾವಿರ ಮತ್ತು ತೃತೀಯ 5 ಸಾವಿರ ಹಾಗೂ ಗಾಳಿಪಟ ಸ್ಪರ್ಧೆಯಲ್ಲಿ ಪ್ರಥಮ 6 ಸಾವಿರ, ದ್ವಿತೀಯ 4 ಸಾವಿರ ಮತ್ತು ತೃತೀಯ 3 ಸಾವಿರ ಬಹುಮಾನ ನೀಡಲಾಗುವುದು’ ಎಂದು ತಿಳಿಸಿದರು. `ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಮುಕ್ತ ಅವಕಾಶವಿದ್ದು, ವಯಸ್ಸಿನ ಯಾವುದೇ ಮಿತಿಯಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಹೆಸರು, ವಿಳಾಸ ಮತ್ತು ಭಾಗವಹಿಸುವ ಸ್ಪರ್ಧೆಗಳ ಮಾಹಿತಿಯನ್ನು ಸೆ. 26ರ ಸಂಜೆ 5 ಗಂಟೆಯೊಳಗೆ ಇಮೇಲ್ ವಿಳಾಸ: ddtourismkarwar@gmail.com ಅಥವಾ ದೂ.ಸಂ: 08382-221172, 8618404610ಗೆ ಕಚೇರಿ ವೇಳೆಯಲ್ಲಿ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದಾಗಿದೆ’ ಎಂದು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಶಿವಕುಮಾರ್, ಜಿಲ್ಲಾ ಪತ್ರಿಕಾ ಭವನದ ಉಪಾಧ್ಯಕ್ಷ ನಾಗರಾಜ ಹರಪನಹಳ್ಳಿ, ಖಜಾಂಚಿ ಗಣಪತಿ ಹೆಗಡೆ, ಕಾರ್ಯದರ್ಶಿ ಸುನೀಲ್ ಹಣಕೋಣ ಉಪಸ್ಥಿತರಿದ್ದರು.