ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಯಲ್ಲಾಪುರದ ಮಂಚಿಕೇರಿ ಸೀಮೆಯ ಮಳಗಿಮನೆ ಕುಟುಂಬದಲ್ಲಿ ಜನಿಸಿದ ಸುಬ್ರಾಯ ಹೆಗಡೆ ತಮ್ಮ ಕುಟುಂಬದವರೊoದಿಗೆ ಸೇರಿ 1968ರಲ್ಲಿಯೇ ಯಕ್ಷಮೇಳ ಕಟ್ಟಿದ್ದರು. ಅವರ `ರಾಜರಾಜೇಶ್ವರಿ ಯಕ್ಷಗಾನ ಮಂಡಳಿ ಭರತನಹಳ್ಳಿ’ ಎಂಬ ಮೇಳದಲ್ಲಿ ಗೋಡೆ ನಾರಾಯಣ ಹೆಗಡೆ, ಕಪ್ಪೆಕೆರೆ ಭಾಗವತರು ಸೇರಿ ಘಟಾನುಘಟಿ ಕಲಾವಿದರಿದ್ದರು. ಮೇಳದ ವ್ಯವಸ್ಥಾಪಕರಿಂದ ಆದ ವಂಚನೆಯಿoದ ಮೇಳ ಒಂದೇ ವರ್ಷಕ್ಕೆ ಸ್ಥಗಿತಗೊಂಡಿದ್ದು, ಮಳಗಿಮನೆ ಕುಟುಂಬದವರು ತಮ್ಮ ಮನೆಯಲ್ಲಿನ ಬಂಗಾರ ಮಾರಿ ಕಲಾವಿದರಿಗೆ ಗೌರವಧನ ನೀಡಿದ್ದರು. `ಯಕ್ಷಗಾನದಿಂದ ಮಳಗಿಮನೆ ಕುಟುಂಬದವರು ದಿವಾಳಿ ಆದರು’ ಎಂದು ಆ ವೇಳೆ ಊರ ತುಂಬ ಸುದ್ದಿ!
ಟೀಕಿಸಿದವರಿಗೆಲ್ಲ ತಕ್ಕ ಉತ್ತರ ಕೊಡಬೇಕು ಎಂಬ ನಿಟ್ಟಿನಲ್ಲಿ ವೃತ್ತಿ ಬದುಕಿನ ಜೊತೆ ಸುಬ್ರಾಯ ಹೆಗಡೆರು ಕಲಾ ಆರಾಧನೆಯಲ್ಲಿಯೂ ಮುಂದುವರೆದರು. ಏಳನೆ ತರಗತಿಗೆ ಶಾಲೆ ಬಿಟ್ಟ ಅವರು ಎರಡು ವರ್ಷಗಳ ಕಾಲ ಬಟಾಟೆ, ಬಾಳೆಕಾಯಿ ಚಿಪ್ಸ್ ಮಾರಾಟ ಮಾಡಿದರು. ನಂತರ ಉಡುಪಿ ಅಂಗಡಿಯೊoದರಲ್ಲಿ ಕೆಲಸಕ್ಕೆ ಸೇರಿದರು. ವಿದ್ಯುತ್ ಉಪಕರಣ ತಯಾರಿಕೆ ಹಾಗೂ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡಿದರು. ಅದೇ ಕಂಪನಿಯ ಬೆಂಗಳೂರು ಮಳಿಗೆಗೂ ವರ್ಗವಾದರು. ಈ ವೇಳೆಯಲ್ಲಿ ಅವರು ಎಂದಿಗೂ ಯಕ್ಷಗಾನವನ್ನು ಮರೆಯಲಿಲ್ಲ.
ಊರಿಗೆ ಮರಳಿದ ಸುಬ್ರಾಯ ಹೆಗಡೆಯವರಿಗೆ 1987ರಲ್ಲಿ ಆನಗೋಡ ಸೇವಾ ಸಹಕಾರಿ ಸಂಘದಲ್ಲಿ ಕೆಲಸ ದೊರೆಯಿತು. ಯಕ್ಷಗಾನದ ಕುರಿತಾದ ಆಸಕ್ತಿ ಆಗ ಮತ್ತೆ ಮುನ್ನೆಲೆಗೆ ಬಂದಿತು. 2005ರಲ್ಲಿ ಬಿಸಗೋಡಿನಲ್ಲಿ ಭಾಸ್ಕರ ಭಟ್ಟ ಬಲೀಗುಳಿ, ನಾಗಪ್ಪ ಕೋಮಾರ ಅವರು ಯಕ್ಷಗಾನ ತರಗತಿ ನಡೆಸುತ್ತಿದ್ದರು. ಅವರೊಂದಿಗೆ ಸೇರಿಕೊಂಡ ಸುಬ್ರಾಯ ಹೆಗಡೆ ನಂತರ ಅದೇ ತರಗತಿಯನ್ನು ಆನಗೋಡಿಗೆ ವರ್ಗಾಯಿಸಿದರು. ನೂರಾರು ಕಲಾಸಕ್ತರಿಗೆ ಕಲೆಯ ಶಿಕ್ಷಣ ನೀಡಲು ಈ ತರಬೇತಿ ಕಾರಣವಾಯಿತು. ಆನಗೋಡಿನ ನಂತರ ಯಲ್ಲಾಪುರದ ರವೀಂದ್ರನಗರ ಶಕ್ತಿ ಗಣಪತಿ ದೇವಸ್ಥಾನಗಳಲ್ಲಿ ಸಹ ತರಗತಿಗಳು ನಡೆದವು. ಕಾಳಮ್ಮನಗರಕ್ಕೆ ಸಹ ತರಗತಿ ವಿಸ್ತಾರವಾಯಿತು.
`ಯಶಸ್ವಿಯಾಗಿ ಯಕ್ಷಗಾನ ತರಬೇತಿ ನಡೆಸಲು ಭಾಸ್ಕರ ಭಟ್ಟ ಬಲಿಗುಳಿ, ನಾರಾಯಣ ಭಾಗ್ವತ, ರಾಘವೇಂದ್ರ ಭಟ್ಟ, ನಾಗಪ್ಪ ಕೋಮಾರ, ವಿಠ್ಠಲ ಪೂಜಾರಿ, ಕೃಷ್ಣ ಹೆಗಡೆ ಜೋಗದಮನೆ, ಅನಂತ ಹೆಗಡೆ ದಂತಳಿಗೆ, ಸದಾಶಿವ ಭಟ್ಟ ಮಲವಳ್ಳಿ, ನರಸಿಂಹ ಭಟ್ಟ ಹಂಡ್ರಮನೆ ಅವರ ಸಹಕಾರವೇ ಕಾರಣ’ ಎಂದು ಹೆಗಡೆಯವರು ಸ್ಮರಿಸುತ್ತಾರೆ. ಸತೀಶ ಯಲ್ಲಾಪುರ ಹಾಗೂ ಅನೇಕ ಕಲಾಸಕ್ತರ ಸಹಕಾರವನ್ನು ಇಲ್ಲಿ ಎಂದಿಗೂ ಮರೆಯುವ ಹಾಗಿಲ್ಲ.
ಇನ್ನೂ ಆನಗೋಡಿನಲ್ಲಿ ತರಗತಿ ನಡೆಯುವಾಗ ಪ್ರತಿ ವಾರ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ತಮ್ಮ ಮನೆಯಲ್ಲಿಯೇ ಸುಬ್ರಾಯ ಹೆಗಡೆ ಅವರು ಊಟ ನೀಡುತ್ತಿದ್ದರು. ಯಕ್ಷಗಾನ ತರಬೇತಿ, ಯಕ್ಷಗಾನ ಸಂಘಟನೆ ಸೇರಿದಂತೆ ಕಲಾಸೇವೆಗಾಗಿ ಸ್ವಂತ ದುಡಿಮೆ ಹಣ ಮೀಸಲಿಡುತ್ತಿದ್ದರು. ಹವ್ಯಾಸಿಯಾಗಿ ಯಕ್ಷಗಾನ ವೇಷಗಳನ್ನೂ ಮಾಡುವ ಹೆಗಡೆ ಅವರು, ಸುಧನ್ವ, ಕೌರವ, ಅರ್ಜುನ, ಉಗ್ರಸೇನ, ಕೀಚಕ, ಭೀಮಕ, ಭರತ, ರಕ್ತಜಂಗ, ಸಾಲ್ವ ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸೊಸೈಟಿ ಕೆಲಸದಿಂದ ನಿವೃತ್ತರಾದ ನಂತರವೂ ಕಲಾಸೇವೆಯಲ್ಲಿ ಮುಂದುವರೆದಿದ್ದಾರೆ.
* ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ