ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಸಿದ್ದಾಪುರ, ಅಂಕೋಲಾ ಪಟ್ಟಣ ಸಾಕಷ್ಟು ಅಭಿವೃದ್ಧಿ ಹೊಂದಿದ್ದು ಕುಮಟಾ ಪುರಸಭೆ ಮಾತ್ರ ಅಭಿವೃದ್ಧಿ ಆಗಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರಮುಖ ನಾಗರಾಜ ಶೇಟ್ ಆರೋಪಿಸಿದ್ದಾರೆ.
`ಸಿದ್ದಾಪುರ ಪಟ್ಟಣ ಪಂಚಾಯತ ಆದರೂ ಅಲ್ಲಿನ ರಸ್ತೆಗಳು ಅಗಲೀಕರಣವಾಗಿದೆ. ಆದರೆ, ಕುಮಟಾ ಪುರಸಭೆ ಆದರೂ ಇಲ್ಲಿನ ರಸ್ತೆ ಅಗಲೀಕರಣ ಆಗಿಲ್ಲ. ಕಾಂಗ್ರೆಸ್ ಆಡಳಿತಕ್ಕೆ ಬರುವ ಮುನ್ನ ರಸ್ತೆ ಅಗಲೀಕರಣ ನಡೆಸುವ ಭರವಸೆ ನೀಡಿದ್ದು, ಆ ಭರವಸೆ ಇದೀಗ ಈಡೇರಿಸಬೇಕು’ ಎಂದವರು ಒತ್ತಾಯಿಸಿದ್ದಾರೆ.
`ಕುಮಟಾ ಪುರಸಭೆ ವ್ಯಾಪ್ತಿಯ 23 ವಾರ್ಡುಗಳಲ್ಲಿಯೂ ಸಮಸ್ಯೆಗಳಿದೆ. ಅದನ್ನು ಬಗೆಹರಿಸದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವೆ’ ಎಂದವರು ಎಚ್ಚರಿಸಿದ್ದಾರೆ. `ಉಸ್ತುವಾರಿ ಸಚಿವ ಮಂಕಾಳು ವೈದ್ಯ ಇಲ್ಲಿನ ಸಮಸ್ಯೆ ಗಮನಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ನಡೆಸಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಘೋಷಣೆ ಕೂಗುವುದು ಅನಿವಾರ್ಯ’ ಎಂದವರು ಹೇಳಿದ್ದಾರೆ.
`ಕುಮಟಾ ಪುರಸಭೆ ವ್ಯಾಪ್ತಿಯಲ್ಲಿ ಜನಸಂದಣಿ ಹೆಚ್ಚಾಗಿದೆ. ವಾಹನ ಸಂಖ್ಯೆ ಸಹ ದುಪ್ಪಟ್ಟಾಗಿದೆ. ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ರಸ್ತೆ ಅಗಲೀಕರಣ ಮಾಡಬೇಕು’ ಎಂದವರು ಆಗ್ರಹಿಸಿದ್ದಾರೆ.