90 ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದರು. ಕಾರವಾರ, ಅಂಕೋಲಾ, ಗೋಕರ್ಣ ಮೊದಲಾದ ಕಡೆ ಅವರು ಅಸ್ಪೃಶ್ಯತೆಯ ಕುರಿತು ಭಾಷಣ ಮಾಡಿದ್ದರು. ಕಾರವಾರದಲ್ಲಿ ಅವರ ಭಾಷಣ ಆಲಿಸಲು ಆ ಕಾಲದಲ್ಲಿಯೇ ಎರಡು ಸಾವಿರ ಮಂದಿ ಸೇರಿದ್ದರು!
1934 ಫೆ. 27 ರಂದು ಮಹಾತ್ಮಾ ಗಾಂಧೀಜಿ ಉಡುಪಿಯಿಂದ ಕಾರವಾರಕ್ಕೆ ಆಗಮಿಸಿದ್ದರು. ವಾಮಾನಶ್ರಮ ರಸ್ತೆಯಲ್ಲಿರುವ ಹಳದಿಪುರ ಅವರ ಮನೆಯಲ್ಲಿ ಗಾಂಧೀಜಿ ತಂಗಿದ್ದರು. ಮರುದಿನ ಮುಂಜಾನೆ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಇದಕ್ಕೆ ಹಳದಿಪುರ ಅವರ ಮನೆಯಲ್ಲಿ ಇಂದಿಗೂ ಹಲವು ಸಾಕ್ಷಿಗಳಿವೆ.
ಗಾಂಧೀಜಿ ನಡೆದ ಹೆಜ್ಜೆಗಳು ಹಳದಿಪುರ ಕುಟುಂಬದವರ ಮನದಲ್ಲಿ ಮೆಲಕು ಹಾಕುತ್ತಿವೆ. ಆ ವೇಳೆ ಕಾರವಾರ ನಗರಾಡಳಿತ ಅಧ್ಯಕ್ಷರಾಗಿದ್ದ ಪಿ.ಎಸ್.ಮುಜುಂದಾರ್, ಹಿಂದೂ ಮಹಾಸಭಾದ ಅಧ್ಯಕ್ಷ ಎಂ.ಬಿ.ಬರ‍್ಕರ್. ಉದ್ಯಮಿ ಕೆ.ಆರ್.ಹಳದಿಪುರಕರ್ ಹಾಗೂ ಹೊರ ಜಿಲ್ಲೆಗಳ ಹಲವು ಗಣ್ಯರು ಗಾಂಧಿಜೀಯವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಆತಿಥ್ಯ ನೀಡಿದ್ದರು. ಜಿಲ್ಲೆಯ ಆತಿಥ್ಯವನ್ನು ಅವರು ಮುಕ್ತ ಕಂಠದಿoದ ಶ್ಲಾಘಿಸಿದ್ದರು.
ಹಳದಿಪುರಕರ್ ಅವರ ಮನೆಯ ಆವರಣದಲ್ಲಿ ಫೆ 28ರ ಬೆಳಗ್ಗೆ ಗಾಂಧೀಜಿ ಪ್ರಾರ್ಥನೆ ನಡೆಸಿದ್ದರು. ನೌಕರರ ವಸತಿ ಸಂಕೀರ್ಣದ ಬಳಿ ಅವರು ಸಾರ್ವಜನಿಕ ಸಭೆ ನಡೆಸಿದ್ದರು. ನಂತರ ಅವರಿಗೆ ಜಿಲ್ಲಾ ಸ್ಥಳಿಯರು ಸಾಗವಾನಿ ಮರದಿಂದ ಮಾಡಿದ ಮೂರ್ತಿ ನೀಡಲಾಗಿತ್ತು. ನಗರಾಡಳಿತದಿಂದ ಬೆಳ್ಳಿಯಲ್ಲಿ ಸ್ಮರಣಿಕೆ ನೀಡಲಾಯಿತು. ಅದನ್ನು ಸ್ಥಳದಲ್ಲೇ ಗಾಂಧೀಜಿ ಹರಾಜು ಹಾಕಿದ್ದು, ಆ ಎರಡೂ ಸ್ಮರಣಿಕೆಯನ್ನು ಸಹ ಹಳದಿಪುರಕರ್ ಕುಟುಂಬದವರೇ 532ರೂಪಾಯಿ ನೀಡಿ ಪಡೆದಿದ್ದರು.
ಗಾಂಧಿಜೀ ಅವರು ಕಾರವಾರಕ್ಕೆ ಬಂದಾಗಿನ ಚಿತ್ರಗಳು. ಅವರಿಗೆ ನೀಡಿದ ಸ್ಮರಣಿಕೆಗಳು ಇಂದಿಗೂ ಹಳದಿಪುರಕರ್ ಮನೆಯಲ್ಲಿ ಕಾಣಸಿಗುತ್ತವೆ. ಮಹಾತ್ಮಾ ಗಾಂಧೀಜಿ ಕಾರವಾರಕ್ಕೆ ಬಂದು 90 ವರ್ಷ ಕಳೆದಿದೆ. ಅವರ ಹೆಜ್ಜೆ ಗುರುತುಗಳನ್ನು ರಕ್ಷಿಸುವ ಕಾರ್ಯ ಹಳದಿಪುರಕರ್ ಕುಟುಂಬದಿoದ ನಡೆಯುತ್ತಿದೆ.