ಕಾರವಾರ: `ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೇವಲ 5 ಕಿ.ಮಿ ಕಾಮಗಾರಿ ಬಾಕಿ ಇದೆ ಎಂದು ಮಾಹಿತಿ ನೀಡುತ್ತಾರೆ. ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲ, ರಸ್ತೆ ಸಂಪೂರ್ಣ ಮುಕ್ತಾಯವಾಗಿಲ್ಲ, ಸೇತುವೆಗಳನ್ನು ಪೂರ್ಣಗೋಳಿಸಿಲ್ಲ. ಇದರಿಂದ ಅಪಘಾತಗಳು ಸಂಭವಿಸಿ ಜನರು ಸಾಯುತ್ತಿದ್ದಾರೆ’ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ದೂರಿದರು.
ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಹೆದ್ದಾರಿ ಅಗಲೀಕರಣ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
`ಬಡವರ ಅರೋಗ್ಯ ಮತ್ತು ಆರ್ಥಿಕವಾಗಿ ಸಬಲೀಕರಣ ಹೊಂದಲು ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೊಜನೆಗಳನ್ನು ಅರ್ಹ ಪಲಾನುಭವಿಗೆ ತಲುಪಿಸುವ ಕಾರ್ಯ ಮಾಡುವುದರ ಜೊತೆಗೆ ಜನಸಾಮಾನ್ಯರು ಕಚೇರಿಗೆ ಬಂದರೆ ಕೂಡಲೇ ಸ್ಪಂದಿಸುವ ಮನೋಭಾವನೆ ಬೆಳಸಿಕೊಳ್ಳಬೇಕು. ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಲಾಗುವುದು ಯಾವುದೇ ಕಾರಣಕ್ಕೂ ಮಕ್ಕಳು ಶಿಕ್ಷಣದಿಂದ ವಂಚಿತರಾಗದoತೆ ಉತ್ತಮ ಶಿಕ್ಷಣ ಒದಗಿಸಲು ಬೇಕಾದ ಎಲ್ಲಾ ಅಗತ್ಯ ನೆರವು ನೀಡಲಾಗುವದು’ ಎಂದರು.
`ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ 77 ಮಕ್ಕಳು ಬಳಲುತ್ತಿದ್ದು, ಈ ಮಕ್ಕಳಿಗೆ ಎನ್ ಆರ್ ಸಿಯಲ್ಲಿ ದಾಖಲು ಪಡಿಸಿ ಇವರಿಗೆ ಪೌಷ್ಠಿಕ ಆಹಾರವನ್ನು ನೀಡಲಾಗುತ್ತದೆ. ಹೃದಯಕ್ಕೆ ಸಂಬoಧಿ ಸಮಸ್ಯೆಯಿರುವ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಬೇಕು’ ಎಂದರು. `ಜಿಲ್ಲೆಯಲ್ಲಿ ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ವೈದ್ಯರು ಮತ್ತು ಸಿಬ್ಬಂದಿ ಗೌರವದಿಂದ ಕಾಣುವುದರ ಜೊತೆಗೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಆಸ್ಪತ್ರೆಗೆ ಬರುವವರು ಬಡ ಜನತೆಯಾಗಿದ್ದು, ಅವರಿಗೆ ಚೀಟಿ ನೀಡಿ ಹೊರಗಡೆಯಿಂದ ಔಷಧ ಪಡೆಯಲು ತಿಳಿಸುವ ವೈದ್ಯರ ವಿರುದ್ದ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.