ಯಲ್ಲಾಪುರ: ಪತ್ರಕರ್ತ ಗುರುಗಣೇಶ ಡಬ್ಗುಳಿ ಬರೆದಿರುವ `ಇದುವರೆಗಿನ ಪ್ರಾಯ’ ಕವನ ಸಂಕಲನ ಅಕ್ಟೊಬರ್ 5ರ ಶನಿವಾರ ಸಂಜೆ 5 ಗಂಟೆಗೆ ತೆಲಂಗಾರಿನ ಮೈತ್ರಿ ಕಲಾ ಭವನದಲ್ಲಿ ಲೋಕಾರ್ಪಣೆ ಆಗಲಿದೆ. 100 ರೂ ಮುಖಬೆಲೆಯ ಈ ಪುಸ್ತಕ ಈ ದಿನದಿಂದ ಶೇ 50ರ ರಿಯಾಯತಿಯೊಂದಿಗೆ ಓದುಗರ ಕೈ ಸೇರಲಿದೆ.
ಕನ್ನಡ ಪುಸ್ತಕ ಪ್ರಾಧಿಕಾರದ ಚೊಚ್ಚಲ ಕೃತಿಗೆ ಆಯ್ಕೆಯಾದ ಪುಸ್ತಕ ಇದಾಗಿದ್ದು, ಖ್ಯಾತ ವಿಮರ್ಶಕ ನರೇಂದ್ರ ಪೈ ಅವರು ಮುನ್ನುಡಿ ಬರೆದಿದ್ದಾರೆ. ಕಲಾವಿದ ಗುರುಪ್ರಸಾದ ಕಾಶಿ ಅವರು ಮುಖಪುಟ ರಚಿಸಿದ್ದಾರೆ. ನಾಗರಾಜ ವೈದ್ಯ ಒಳಪುಟ ವಿನ್ಯಾಸ ಮಾಡಿಕೊಟ್ಟಿದ್ದಾರೆ. ಅ 5ರಂದು ಖ್ಯಾತ ಕಥೆಗಾರ ಶ್ರೀಧರ ಬಳಗಾರ್ ಅವರು ಪುಸ್ತಕ ಬಿಡುಗಡೆ ಮಾಡಿ ಓದುಗರಿಗೆ ವಿತರಿಸಲಿದ್ದಾರೆ.
ಗುರುಗಣೇಶ ಡಬ್ಗುಳಿ ಯಾರು?
ನಾಡಿನ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ವಿವಿಧ ಹುದ್ದೆ ನಿಭಾಯಿಸಿರುವ ಗುರುಗಣೇಶ ಡಬ್ಗುಳಿ ಯಲ್ಲಾಪುರ ತಾಲೂಕಿನ ಅರಬೈಲಿನವರು. ಅಲ್ಲಿನ ಡಬ್ಗುಳಿ ಅವರ ಮೂಲ ವಿಳಾಸ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ. ಲೋಕಲ್ 18 ವಿಭಾಗದ ಪ್ರಾಜೆಕ್ಟ್ ನಿರ್ವಹಣೆ ಈಗಿನ ಕೆಲಸ. ಇದರೊಂದಿಗೆ ಬಿಡುವಿನ ವೇಳೆಯಲ್ಲಿ ಕಥೆ-ಕವನ ಬರೆಯುವುದು ಮುಖ್ಯ ಹವ್ಯಾಸ.
ಆ ದಿನ ಬಿಡುಗಡೆ ಅಷ್ಟೇನಾ?!
ಅಕ್ಟೊಬರ್ 5ರಂದು ಸಂಜೆ 5 ಗಂಟೆಗೆ ಪುಸ್ತಕ ಬಿಡುಗಡೆ. ಅದಾದ ನಂತರ ಮೈತ್ರಿ ಕಲಾ ಬಳಗ ಸಂಘಟನೆಯಲ್ಲಿ ಸಾಹಿತ್ಯ ಆಸಕ್ತರ ಚರ್ಚೆ, ಕವನ ವಾಚನ ಕಾರ್ಯಕ್ರಮ ನಡೆಯಲಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ `ತಿಂಗಳ ಅರಿವಿನ ಅಂಗಳ’ ಕಾರ್ಯಕ್ರಮವನ್ನು ಆಯೋಜಿಸಿದೆ. 27 ಕವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವ ರಚಿತ ಕವನ ವಾಚಿಸಲಿದ್ದಾರೆ.
ಸಾಹಿತ್ಯ ಆಸಕ್ತರೇ, ನೀವು ಬನ್ನಿ… ನಿಮ್ಮವರನ್ನು ಕರೆ ತನ್ನಿ!