ನವೆಂಬರ್ 1ರಿಂದ ನಾಲ್ಕು ದಿನಗಳ ಕಾಲ ಸಂಕಲ್ಪ ಉತ್ಸವ ನಡೆಯಲಿದೆ. ಸಂಕಲ್ಪ ಉತ್ಸವದ ಭಾಗವಾಗಿ ಡಿಸೆಂಬರ್ 2ನೇ ವಾರ ಯಲ್ಲಾಪುರದಲ್ಲಿ ನಾಟಕೋತ್ಸವವನ್ನು ಸಹ ಸಂಘಟಿಸಲಾಗಿದೆ. ಸೆ 4ರಂದು ಸಂಕಲ್ಪ ಉತ್ಸವದಲ್ಲಿ ಚಿಗುರು ತಂಡದಿoದ ನಡೆಯುವ ಕಾರ್ಯಕ್ರಮಗಳು ಈ ಬಾರಿ ಉತ್ಸವದ ವಿಶೇಷಗಳಲ್ಲಿ ಒಂದು. ಪ್ರತಿ ದಿನ ಸಭಾ ಕಾರ್ಯಕ್ರಮಕ್ಕೂ ಮುನ್ನ ಗೀತಾ ಪಾರಾಯಣ ಪಠಣವೂ ಇರಲಿದೆ.
ಯಲ್ಲಾಪುರ: 37 ವರ್ಷಗಳಿಂದ ಯಲ್ಲಾಪುರದಲ್ಲಿ ಯಕ್ಷಗಾನ ಸಂಘಟಿಸುತ್ತ ಬಂದಿರುವ ಸಾಂಸ್ಕೃತಿಕ ರಾಯಬಾರಿ ಪ್ರಮೋದ ಹೆಗಡೆ 38ನೇ ವರ್ಷದ ಸಂಕಲ್ಪ ಉತ್ಸವಕ್ಕೆ ಸಜ್ಜಾಗಿದ್ದಾರೆ. ಈ ಬಾರಿ ಪ್ರಮೋದ ಹೆಗಡೆ ಅವರ ಪುತ್ರರಾದ ಪ್ರಸಾದ ಹೆಗಡೆ ಹಾಗೂ ಪ್ರಶಾಂತ ಹೆಗಡೆ ಮುಂದಾಳತ್ವದಲ್ಲಿ ನಾಲ್ಕು ದಿನಗಳ ಕಾಲ ಈ ಉತ್ಸವ ನಡೆಯಲಿದೆ.
ನವೆಂಬರ್ 1ರಿಂದ 4ರವರೆಗೆ ಪ್ರತಿ ದಿನ ಸಂಜೆ 4.30ರಿಂದ ಸಂಕಲ್ಪ ಉತ್ಸವದ ಕಾರ್ಯಕ್ರಮಗಳು ಶುರುವಾಗಲಿದೆ. ಯಕ್ಷಗಾನ ಪ್ರದರ್ಶನದ ಜೊತೆ ಇನ್ನೂ ಅನೇಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಈ ವೇದಿಕೆ ಸಾಕ್ಷಿಯಾಗಲಿದೆ. `ನ. 1ರ ಸಂಜೆ ಸ್ವರ್ಣವಲ್ಲೀ ಶ್ರೀಗಳು ಉತ್ಸವ ಉದ್ಘಾಟಿಸಲಿದ್ದಾರೆ. ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳ 15 ಜನರಿಗೆ ಈ ಬಾರಿ ಸಂಕಲ್ಪ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ’ ಎಂದು ಪ್ರಮೋದ ಹೆಗಡೆ ಸುದ್ದಿಗಾರರಿಗೆ ತಿಳಿಸಿದರು. `ಯುನಸ್ಕೋ ಮಾನ್ಯತೆ ಕೆರೆಮನೆ ಮೇಳದ ಮೂಲಕ ಯಕ್ಷಗಾನಕ್ಕೆ ದೊರೆತಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನ ಗುರುತಿಸಿಕೊಳ್ಳುವಂತೆ ಮಾಡಿದೆ’ ಎಂದವರು ಈ ವೇಳೆ ಸಂತಸ ಹಂಚಿಕೊoಡರು.
ಸಂಕಲ್ಪ ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ ಮಾತನಾಡಿ `ಸಂಕಲ್ಪ ಉತ್ಸವದ ನಾಲ್ಕು ದಿನಗಳ ಕಾಲ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ, ತಾಳಮದ್ದಲೆ, ಭಜನೆ, ಭಕ್ತಿ ಸಂಗೀತ, ನೃತ್ಯ ರೂಪಕ, ಕೀರ್ತನೆ, ಭರತನಾಟ್ಯ ನಡೆಯಲಿದೆ. ನ 4ರಂದು ಆಯುರ್ವೇದ ಚಿಕಿತ್ಸಾ ಶಿಬಿರ ನಡೆಯಲಿದೆ’ ಎಂದು ಮಾಹಿತಿ ನೀಡಿದರು. ಅರ್ಥಧಾರಿ ಎಂ.ಎನ್.ಹೆಗಡೆ ಮಾತನಾಡಿ `ಸಂಕಲ್ಪ ಉತ್ಸವ ಜನರ ಉತ್ಸವವಾಗಿ ಮುನ್ನಡೆಯುತ್ತಿದೆ. ಪ್ರತಿ ವರ್ಷ ಉತ್ಸವಕ್ಕಾಗಿ ಜನರು ಕಾಯುತ್ತಿದ್ದಾರೆ’ ಎಂದರು.
ಸoಸ್ಥೆಯ ಪ್ರಮುಖರಾದ ಪ್ರಶಾಂತ ಹೆಗಡೆ, ರವಿ ಭಟ್ಟ ಬಿಡಾರ, ಗೋಪಣ್ಣ ತಾರೀಮಕ್ಕಿ, ನಾರಾಯಣ ಭಟ್ಟ, ಲೋಕನಾಥ ಗಾಂವ್ಕರ, ಪ್ರದೀಪ ಯಲ್ಲಾಪುರಕರ್ ಉಪಸ್ಥಿತರಿದ್ದರು.