6

‘ಯಲ್ಲಾಪುರ ಭಾಗವತರಿಗೆ’ ಯಲ್ಲಾಪುರದಲ್ಲಿಂದು ಸನ್ಮಾನ

ಯಲ್ಲಾಪುರದ ಕಾರ್ಮಿಕ ಭವನದಲ್ಲಿ ಇಂದು ಶ್ರಾವಣ ಯಕ್ಷ ಸಂಭ್ರಮದ ದಶಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ತೆಂಕು-ಬಡುಗಗಳೆರಡರಲ್ಲೂ ಪರಿಣಿತರಾದ ಭಾಗವತ ದಿನೇಶ ಭಟ್ಟ ಯಲ್ಲಾಪುರ ಅವರನ್ನು ಸನ್ಮಾನಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದಿನೇಶ ಭಟ್ಟರ ಕುರಿತು ಯಕ್ಷಗಾನ ಕವಿ, ಕಲಾವಿದ ಡಾ.ಶಿವಕುಮಾರ ಅಳಗೋಡು ಅವರು ಬರೆದ ಪರಿಚಯಾತ್ಮಕ ಲೇಖನ ಇಲ್ಲಿದೆ.

ಯಲ್ಲಾಪುರ ತಾಲೂಕಿನ ತೇಲಂಗಾರ ಗ್ರಾಮದ ಅಬ್ಬಿತೋಟ ಎಂಬಲ್ಲಿ ಸದಾಶಿವ ಭಟ್ಟ ಮತ್ತು ಶಾರದಾ ದಂಪತಿಗಳಿಗೆ ಮಗನಾಗಿ ಜನಿಸಿದವರು ದಿನೇಶ.‌ ಶಾಲೆಯ ಓದು ಒಂಭತ್ತನೆಯ ತರಗತಿಗೆ ನಿಂತಿತು.
ಕೆರೆಮನೆ ಶಂಭು ಹೆಗಡೆಯವರ, ಗುಣವಂತೆಯ ‘ಶ್ರೀಮಯ ಕಲಾ ಕೇಂದ್ರ’ಕ್ಕೆ ಸೇರಿ, ಸುಬ್ರಹ್ಮಣ್ಯ ಆಚಾರ್‍ರಿಂದ ಭಾಗವತಿಕೆ, ಸುಬ್ರಹ್ಮಣ್ಯ ಪ್ರಸಾದ ಮುದ್ರಾಡಿಯವರಿಂದ ನರ್ತನ, ಮೂರೂರು ಗಜಾನನ ಹೆಗಡೆಯವರಿಂದ ಚಂಡೆಮದ್ದಳೆಯ ನುಡಿತ ಅಭ್ಯಸಿಸಿದರು. ಅನಂತ ಹೆಗಡೆ ದಂತಳಿಗೆಯವರಿಂದ ಪ್ರಸಂಗಗಳ ಅಭ್ಯಾಸ, ಬಸವ ಮುಂಡಾಡಿಯವರಿಂದ ಚಂಡೆಮದ್ದಳೆಯ ಹೆಚ್ಚಿನ ಪಾಠ, ಕೆ.ಪಿ. ಹೆಗಡೆಯವರಲ್ಲಿಯೂ ಪ್ರಸಂಗಾಭ್ಯಾಸ ನಡೆಸಿದರು.

ಗುಂಡಬಾಳದ ಮೇಳದಲ್ಲಿ ಎರಡು ವರ್ಷ ಸಂಗೀತಗಾರರಾಗಿ, ಬೆಳಗಿನ ಜಾವದ ಪ್ರಸಂಗಗಳಲ್ಲಿ ವೇಷವನ್ನೂ ಮಾಡುತ್ತ ಕಲಾಯಾನ ಆರಂಭವಾಯಿತು. ಧರ್ಮಸ್ಥಳದ ಕಲಾ ಕೇಂದ್ರ’ಕ್ಕೆ ಸೇರಿ ದಿವಾಣ ಶಿವಶಂಕರ ಭಟ್ಟರಲ್ಲಿ ತೆಂಕುತಿಟ್ಟಿನ ನಾಟ್ಯಾಭ್ಯಾಸ ಮಾಡಿ, ಅನೇಕ ವೇಷಗಳನ್ನೂ ಮಾಡಿದ್ದಾರೆ. ಸ್ವಲ್ಪ ಕಾಲ ಕಟೀಲು ಮೇಳದಲ್ಲಿಯೂ ಸಂಗೀತಗಾರರಾಗಿ, ಮರುವರ್ಷ ಮಂದಾರ್ತಿ ಮೇಳಕ್ಕೆ ಸೇರಿ ತಿರುಗಾಟ ಮಾಡಿದವರು.
ಎರಡು ವರ್ಷ ಕೆರೆಮನೆ ಕೇಂದ್ರದಲ್ಲಿ, ನಂತರ ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

ಬನ್ನಂಜೆ ಸಂಜೀವ ಸುವರ್ಣರ ಒಡನಾಟ, ಮಾರ್ಗದರ್ಶನ ದಿನೇಶ ಅವರು ಪ್ರಬುದ್ಧತೆ ಸಾಧಿಸಲು ಕಾರಣವಾಯಿತು.
ನಂತರ ಗಣೇಶ ಕೊಲೆಕಾಡಿಯವರಲ್ಲಿ ಛಂದಸ್ಸು ಹಾಗೂ ತೆಂಕಿನ ಭಾಗವತಿಕೆಯನ್ನೂ ಶಾಸ್ತ್ರೀಯವಾಗಿ ಅಭ್ಯಸಿಸಿದ ದಿನೇಶರು, ಕಟೀಲು ಮೇಳಕ್ಕೆ ಸೇರಿ, ಸತತ ಐದು ವರ್ಷ, ನಂತರ ಧರ್ಮಸ್ಥಳ ಮೇಳದಲ್ಲೂ ಭಾಗವತಿಕೆ ಮಾಡಿದ್ದಾರೆ. ಉತ್ತರಕನ್ನಡದ ಕಡತೋಕ ಮಂಜುನಾಥ ಭಾಗವತರು ಮತ್ತು ಕೃಷ್ಣ ಭಾಗವತರು ಬಡಗು, ತೆಂಕು ಎರಡೂ ತಿಟ್ಟುಗಳಲ್ಲಿಯೂ ಭಾಗವತಿಕೆ ಮಾಡಿ ಧರ್ಮಸ್ಥಳ ಮೇಳದಲ್ಲಿ ವಿಜೃಂಭಿಸಿದವರು. ಅವರ ಬಳಿಕ ಈ ಕೀರ್ತಿಗೆ ಭಾಜನರಾಗಿರುವುದು ದಿನೇಶ ಭಟ್ಟರು ಮಾತ್ರ.

ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತಗಳೆರಡರ ಪ್ರಾಥಮಿಕ ಅಭ್ಯಾಸವನ್ನೂ ಮಾಡಿರುವ ಅವರು, ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಚಿದಂಬರ ರಾವ್ ಜಂಬೆಯವರ ನಿರ್ದೇಶನದ ಹಿಂದಿ ನಾಟಕಕ್ಕೆ ಸಂಗೀತ ನಿರ್ದೇಶನ ಮಾಡಿ ಹಾಡಿರುವುದೂ ದೊಡ್ಡ ಸಾಧನೆ. ಹಾರ್ಮೋನಿಯಂ ನುಡಿಸುವಿಕೆಯ ಮೂಲಕ ರಾಗಗಳ ನಿಖರ ಜ್ಞಾನವನ್ನೂ ಗಳಿಸಿಕೊಂಡಿದ್ದಾರೆ.

ಕನ್ನಡದೊಂದಿಗೆ ಹಿಂದಿ, ಕೊಂಕಣಿ, ಉರ್ದು ಭಾಷೆಗಳನ್ನೂ ಸರಾಗವಾಗಿ ಮಾತಾನಾಡುವ ಪ್ರತಿಭೆ ಭಟ್ಟರದು. ಯಕ್ಷಗಾನದ ವಲಯದಲ್ಲಿ ‘ಯಲ್ಲಾಪುರ ಭಾಗವತರು’ ಎಂದೇ ಜನರು ಪ್ರೀತಿಯಿಂದ ಗುರುತಿಸುವುದು ವಿಶೇಷ.

ಸಮಾನ ಮನಸ್ಕ ಗೆಳೆಯರೊಂದಿಗೆ ಕರ್ನಾಟಕ ಕಲಾಸನ್ನಿಧಿ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಕಲಾಸೇವೆಯಲ್ಲಿ ತೊಡಗುವುದರೊಟ್ಟಿಗೆ, ನಿರಂತರ ಅಭ್ಯಾಸ, ಕ್ರಿಯಾಶೀಲತೆಯ ಮೂಲಕ ಯಕ್ಷಗಾನ ಕಲೆಯ ಮೂಲ ಆಶಯಕ್ಕೆ ಪೂರಕವಾಗಿ ಶ್ರಮಿಸುತ್ತಿದ್ದಾರೆ. ತಾಯಿ ಶಾರದಾ,ಮಡದಿ ಸಾವಿತ್ರಿ, ಮಗ ಜಯಂತನೊಟ್ಟಿಗೆ ನೆಮ್ಮದಿಯ ಬದುಕನ್ನು ಸಾಗಿಸುತ್ತಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ ದಿನೇಶ ಅವರು ಸಾಧನೆಯ ಹೆಮ್ಮರವಾಗಿ ಬೆಳೆಯುವಂತೆ ಅನುಗ್ರಹಿಸಲಿ ಎನ್ನುವುದು ನಮ್ಮೆಲ್ಲರ ಆಶಯ ನಮ್ಮದು.‌

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page