6

ಯಕ್ಷಗಾನ ಕಾರ್ಯಕ್ರಮ ಯಶಸ್ವಿಯಾದ ಸಂಭ್ರಮದಲ್ಲೇ ಉಸಿರು ನಿಲ್ಲಿಸಿದ ಕೃಷ್ಣ ಹೆಗಡೆ ರುಮಡಿಗದ್ದೆ

ಯಲ್ಲಾಪುರ ತಾಲೂಕಿನ ಉಪಳೇಶ್ವರ ಸಮೀಪದ ರುಮಡಿಗದ್ದೆಯ ಹಿರಿಯ ಕಲಾವಿದ ಕೃಷ್ಣ ಹೆಗಡೆ ಮಂಗಳವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

ಉಪಳೇಶ್ವರದಲ್ಲಿ ಸೋಮವಾರ ರಾತ್ರಿ ಯಕ್ಷಗಾನ ಸಂಘಟಿಸಿದ್ದ ಅವರು, ಕಾರ್ಯಕ್ರಮದಲ್ಲಿ ಲವಲವಿಕೆಯಿಂದ ಓಡಾಡಿಕೊಂಡಿದ್ದರು. ಸಂಘಟನೆಯ ನೇತೃತ್ವ ವಹಿಸಿ, ಯಕ್ಷಗಾನಕ್ಕೆ ಬಂದ ಅಭ್ಯಾಗತರು, ಪ್ರೇಕ್ಷಕರು, ಕಲಾವಿದರನ್ನು ಪ್ರೀತಿಯಿಂದ ಮಾತನಾಡಿಸುತ್ತ, ಆರೋಗ್ಯವಾಗಿಯೇ ಇದ್ದ ಹೆಗಡೆಯವರು, ಯಕ್ಷಗಾನ ಮುಗಿದ ನಂತರ ಮನೆಗೆ ಹೋಗಿ ಮಲಗಿದವರು ಮತ್ತೆ ಏಳಲೇ ಇಲ್ಲ!

8 ವರ್ಷಗಳ ಹಿಂದೆ ತಾಲೂಕಿನಲ್ಲಿ ಬರಗಾಲ ಉಂಟಾದಾಗ ಮಳೆಗಾಗಿ ಪ್ರಾರ್ಥಿಸಿ, ಯಕ್ಷಗಾನದ ಹರಕೆ ಹೇಳಿಕೊಂಡಿದ್ದರು. ಅದರಂತೆ ಯಕ್ಷಗಾನ ಮಾಡಿ ಒಂದು ವಾರದಲ್ಲಿ ಮಳೆ ಆರಂಭವಾಗಿತ್ತು. ಅದಾದ ನಂತರ ಪ್ರತಿ ವರ್ಷ ಯಕ್ಷಗಾನ ಆಯೋಜಿಸುತ್ತ ಬಂದಿದ್ದರು. 8 ನೇ ವರ್ಷದ ಯಕ್ಷಗಾನ ಸೋಮವಾರ ರಾತ್ರಿ ನಡೆದಿದ್ದು, ಅನೇಕ ದಿನಗಳಿಂದ ಈ ಕಾರ್ಯಕ್ರಮದ ಸಂಘಟನೆಗಾಗಿ ಕೃಷ್ಣ ಹೆಗಡೆ ತೊಡಗಿಸಿಕೊಂಡಿದ್ದರು.

ಕಳೆದ ಮೇ ತಿಂಗಳಲ್ಲಿ ಆಯೋಜನೆಗೊಂಡಿದ್ದ ಈ ಕಾರ್ಯಕ್ರಮ ಮಳೆಯ ಕಾರಣಕ್ಕೆ ರದ್ದಾಗಿತ್ತು. ಇದೀಗ ಅಕ್ಟೋಬರ್ ನಲ್ಲಿ ಸಂಯೋಜನೆಗೊಂಡಾಗಲೂ ಮಳೆಯ ಭೀತಿ ಎದುರಾದಾಗ, ಮತ್ತೆ ಮುಂದೂಡುವುದು ಬೇಡ ಎಂದು ಗ್ರಾ.ಪಂ ಸಭಾಭವನದಲ್ಲಿ ಕಾರ್ಯಕ್ರಮ ಸಂಘಟಿಸಿದ್ದರು.

ತಮ್ಮ 11 ನೇ ವಯಸ್ಸಿನಲ್ಲಿ ಉಪಳೇಶ್ವರ ಸಮೀಪದ ಸಾಸ್ಮೆಗದ್ದೆಯಲ್ಲಿ ರಂಗ ಪ್ರವೇಶ ಮಾಡಿದರು. ಕೋಡಂಗಿ ವೇಷದಿಂದ ಆರಂಭಿಸಿ, ನಂತರ ಎಲ್ಲ ಬಗೆಯ ವೇಷಗಳನ್ನು ರೂಢಿಸಿಕೊಂಡರು. ಯಾರಿಂದಲೂ ಹೆಜ್ಜೆ, ತಾಳ ಅಭ್ಯಾಸ ಮಾಡಿದವರಲ್ಲ. ಆದರೆ ಹಿರಿಯ ಕಲಾವಿದರ ಹೆಜ್ಜೆ, ಅಭಿನಯ, ಅರ್ಥಗಾರಿಕೆಯನ್ನು ನೋಡಿಯೇ ಕಲಿತದ್ದು ವಿಶೇಷ.

ಉಪಳೇಶ್ವರ ಸುತ್ತಮುತ್ತಲಿನ ಮಕ್ಕಳಿಗೆ ಯಕ್ಷಗಾನದ ಕುರಿತು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ನಿರ್ದೇಶನ ನೀಡಿ, ಅನೇಕ ಪ್ರದರ್ಶನಗಳನ್ನು ಮಾಡಿಸಿದ್ದಾರೆ. ವೇಷ, ಸಂಘಟನೆ, ನಿರ್ದೇಶನ ಸೇರಿದಂತೆ ವಿವಿಧ ನೆಲೆಯಲ್ಲಿ ಐದೂವರೆ ದಶಕಗಳ ಕಲಾ ಸೇವೆ ರುಮಡಿಗದ್ದೆ ಕೃಷ್ಣ ಹೆಗಡೆಯವರದ್ದು.

ಸದಾ ಯಕ್ಷಗಾನದ ಯೋಚನೆ, ಚಿಂತನೆಯಲ್ಲೇ ಇರುತ್ತಿದ್ದ ಅವರು, ಯಕ್ಷಗಾನ ಸಂಘಟಿಸಿ, ಕಾರ್ಯಕ್ರಮ ಯಶಸ್ವಿಯಾದ ಸಂಭ್ರಮದಲ್ಲೇ ಇಹಲೋಕ ತ್ಯಜಿಸಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page