6

ಚಿನ್ನದ ನಾಡಾಗುತ್ತಾ ಹಾವೇರಿ.?

ಹಾವೇರಿಯಲ್ಲಿ ಚಿನ್ನದ ನಿಕ್ಷೇಪ ಶೋಧನೆಗೆ ಸಿದ್ಧತೆ: 450 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಸಮೀಕ್ಷೆ

ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪದ ಹುಡುಕಾಟಕ್ಕೆ ಮತ್ತೆ ಚಾಲನೆ ಸಿಗುವ ಸಾಧ್ಯತೆ ಎದುರಾಗಿದೆ. ಜಿಲ್ಲೆಯ ಸಾಲು ಗುಡ್ಡ ಅರಣ್ಯ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇರುವಿಕೆಯ ಕುರಿತು ಸಮೀಕ್ಷೆ ನಡೆಸಲು ಅರಣ್ಯ ಇಲಾಖೆ ಅನುಮತಿ ನೀಡಿದ್ದು, ಕೆಲವೇ ದಿನಗಳಲ್ಲಿ ಸಮೀಕ್ಷೆ ಆರಂಭವಾಗಲಿದೆ.

ಸುಮಾರು 450 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಪರೀಕ್ಷೆ ನಡೆಸಲು ಅನುಮತಿ ನೀಡಲಾಗಿದೆ. ಮಧ್ಯಪ್ರದೇಶ ಮೂಲದ ಕುಂದನ್ ಗೋಲ್ಡ್ ಮೈನ್ಸ್ ಎಂಬ ಕಂಪನಿಗೆ ಈ ಸಮೀಕ್ಷೆ ನಡೆಸಲು ಅರಣ್ಯ ಇಲಾಖೆ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.

78 ಕಡೆ ಬೋರ್ ಕೊರೆದು ಮಣ್ಣು ಪರೀಕ್ಷೆ

ಚಿನ್ನದ ನಿಕ್ಷೇಪದ ಪ್ರಮಾಣ ಹಾಗೂ ಲಭ್ಯತೆಯನ್ನು ಪತ್ತೆಹಚ್ಚಲು ಕಂಪನಿಯು ಸುಮಾರು 78 ಕಡೆಗಳಲ್ಲಿ ಭೂಮಿಗೆ ರಂಧ್ರ ಕೊರೆದು ಮಣ್ಣು ಮತ್ತು ಅದಿರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಿದೆ. ಈ ಮೂಲಕ ಭೂಮಿಯ ಆಳದಲ್ಲಿ ಚಿನ್ನದ ಅಂಶ ಎಷ್ಟಿದೆ ಎಂಬುದನ್ನು ಪತ್ತೆಹಚ್ಚುವ ಪ್ರಯತ್ನ ನಡೆಯಲಿದೆ.

ಸದ್ಯ ಆರು ತಿಂಗಳ ಕಾಲಮಿತಿಯಲ್ಲಿ ಚಿನ್ನದ ನಿಕ್ಷೇಪದ ಸಮೀಕ್ಷೆ ನಡೆಸಲು ಅನುಮತಿ ನೀಡಲಾಗಿದೆ. ಜಿಎಸ್‌ಐ (Geological Survey of India) ಸಮೀಕ್ಷೆಯ ಆಧಾರದಲ್ಲಿ ವಿವಿಧ ಹಂತಗಳಲ್ಲಿ ಶೋಧ ಕಾರ್ಯ ನಡೆಯಲಿದೆ ಎನ್ನಲಾಗಿದೆ.

ಈ ಹಿಂದೆಯೂ ನಡೆದಿತ್ತು ಚಿನ್ನದ ಹುಡುಕಾಟ

ಹಾವೇರಿ ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪಕ್ಕಾಗಿ ಈ ಹಿಂದೆಯೂ ಹಲವು ಬಾರಿ ಹುಡುಕಾಟ ಹಾಗೂ ಸಮೀಕ್ಷೆಗಳು ನಡೆದಿದ್ದವು. ಆದರೆ ಆ ಸಂದರ್ಭದಲ್ಲಿ ಚಿನ್ನದ ಬೆಲೆ ಇಂದಿನ ಮಟ್ಟಿಗೆ ಏರಿಕೆಯಾಗಿರಲಿಲ್ಲ.

ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾದರೆ ಗಣಿಗಾರಿಕೆ ನಡೆಸಲು ಕಂಪನಿಗಳು ಆಸಕ್ತಿ ತೋರಿಸುವ ಸಾಧ್ಯತೆ ಇದೆ.

ಟನ್‌ಗೆ 2 ಗ್ರಾಂ ಚಿನ್ನ ಸಿಕ್ಕರೂ ಗಣಿಗಾರಿಕೆ?

ಸಮೀಕ್ಷೆಯಲ್ಲಿ ಒಂದು ಟನ್ ಅದಿರಿನಲ್ಲಿ ಸುಮಾರು 2 ಗ್ರಾಂನಷ್ಟು ಚಿನ್ನ ದೊರೆತರೂ, ಪ್ರಸ್ತುತ ಚಿನ್ನದ ಬೆಲೆ ಹಾಗೂ ಗಣಿಗಾರಿಕೆಯ ಆರ್ಥಿಕ ಸಾಧ್ಯತೆಗಳನ್ನು ಪರಿಗಣಿಸಿ ಮುಂದಿನ ಹಂತದಲ್ಲಿ ಗಣಿಗಾರಿಕೆ ನಡೆಸಲು ಕಂಪನಿಗಳು ಮುಂದಾಗುವ ಸಾಧ್ಯತೆ ಇದೆ ಎಂಬ ಚರ್ಚೆ ಆರಂಭವಾಗಿದೆ.

ಸದ್ಯ ನಡೆಯಲಿರುವುದು ಕೇವಲ ಚಿನ್ನದ ನಿಕ್ಷೇಪದ ಶೋಧನೆ ಮತ್ತು ಸಮೀಕ್ಷೆ ಮಾತ್ರ. ನಿಗದಿತ ಪ್ರಮಾಣದಲ್ಲಿ ಚಿನ್ನದ ಅದಿರು ಲಭ್ಯವಾಗಿರುವುದು ದೃಢಪಟ್ಟ ಬಳಿಕವಷ್ಟೇ ಮುಂದಿನ ಹಂತದ ಪ್ರಕ್ರಿಯೆ ನಡೆಯಲಿದೆ.

ಹಾವೇರಿ ಚಿನ್ನದ ನಾಡಾಗುತ್ತಾ?

ಸಮೀಕ್ಷೆಯಲ್ಲಿ ನಿರೀಕ್ಷಿತ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾದರೆ, ಮುಂದಿನ ದಿನಗಳಲ್ಲಿ ಗಣಿಗಾರಿಕೆಗೆ ದಾರಿ ತೆರೆಯುವ ಸಾಧ್ಯತೆ ಇದೆ. ಹೀಗಾಗಿ ಈ ಸಮೀಕ್ಷೆಯ ಫಲಿತಾಂಶದ ಮೇಲೆ ಇದೀಗ ಜಿಲ್ಲೆಯ ಜನರ ಕುತೂಹಲ ನೆಟ್ಟಿದೆ.

ಸಾಲು ಗುಡ್ಡ ಅರಣ್ಯ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಶೋಧನೆಗೆ ಅರಣ್ಯ ಇಲಾಖೆ ಅನುಮತಿ ನೀಡಿರುವುದನ್ನು ಅರಣ್ಯ ಇಲಾಖೆ ಡಿಎಫ್‌ಒ ಅಕ್ಷಯ್ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಖಚಿತಪಡಿಸಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page