6

ಗಣೇಶೋತ್ಸವಕ್ಕೆ ಪೊಲೀಸ್ ಇಲಾಖೆ ಮಾರ್ಗಸೂಚಿ,

ಗಣೇಶೋತ್ಸವಕ್ಕೆ ಹಾವೇರಿ ಪೊಲೀಸರ ಖಡಕ್ ಸಂದೇಶ..! ದೊಡ್ಡ ಮೂರ್ತಿಗಳಿಗೆ 6 ಅಡಿ ಅಗಲ, 10 ಅಡಿ ಎತ್ತರ ಮಿತಿ

ಹಾವೇರಿ: ಗಣೇಶೋತ್ಸವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಗೆ ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಸೂಚಿಸಿದೆ. ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆ ವೇಳೆ ಯಾವುದೇ ರೀತಿಯ ಅವಘಡ ಸಂಭವಿಸದಂತೆ ಸಾರ್ವಜನಿಕರು ಹಾಗೂ ಗಣೇಶೋತ್ಸವ ಆಯೋಜಕರು ಮುನ್ನೆಚ್ಚರಿಕೆ ವಹಿಸುವಂತೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ IPS ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಸಂದೇಶ ನೀಡಿದ್ದಾರೆ.

ಅತೀ ಎತ್ತರದ ಅಥವಾ ಬೃಹತ್ ಗಾತ್ರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದನ್ನು ತಪ್ಪಿಸಿ, ಸುರಕ್ಷಿತ ಗಾತ್ರದ ಮೂರ್ತಿಗಳಿಗೆ ಆದ್ಯತೆ ನೀಡುವಂತೆ ಎಸ್‌ಪಿ ಅವರು ಮನವಿ ಮಾಡಿದ್ದಾರೆ.

ಅತೀ ಎತ್ತರದ ಗಣೇಶ ಮೂರ್ತಿಗಳು ಗಾಳಿ, ಮಳೆ ಅಥವಾ ಅಸಮರ್ಪಕವಾಗಿ ನಿರ್ಮಿಸಿದ ವೇದಿಕೆಯಿಂದ ಕುಸಿದು ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಆಯೋಜಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.

ವಿದ್ಯುತ್ ತಂತಿ, ಕಂಬಗಳ ಬಗ್ಗೆ ಎಚ್ಚರಿಕೆ

ಗಣೇಶ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಸಾಗಿಸುವ ಸಂದರ್ಭದಲ್ಲಿ ವಿದ್ಯುತ್ ತಂತಿ, ವಿದ್ಯುತ್ ಕಂಬ ಹಾಗೂ ಟ್ರಾನ್ಸ್‌ಫಾರ್ಮರ್‌ಗಳಿಗೆ ತಾಗಿ ಪ್ರಾಣಹಾನಿಯಾದ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖೆ ಸೂಚಿಸಿದೆ.

ಅದೇ ರೀತಿ ಕಿರಿದಾದ ರಸ್ತೆಗಳು ಹಾಗೂ ತಿರುವುಗಳಲ್ಲಿ ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನು ಸಾಗಿಸುವುದು ಅಪಾಯಕಾರಿಯಾಗಬಹುದು. ಹೀಗಾಗಿ ಮೆರವಣಿಗೆ ಮಾರ್ಗದ ಬಗ್ಗೆಯೂ ಆಯೋಜಕರು ಮುಂಚಿತವಾಗಿ ಗಮನಹರಿಸಬೇಕು ಎಂದು ತಿಳಿಸಲಾಗಿದೆ.

ದುರ್ಬಲ ವೇದಿಕೆ ನಿರ್ಮಿಸಬೇಡಿ

ದೊಡ್ಡ ಗಾತ್ರದ ಗಣೇಶ ಮೂರ್ತಿಯ ತೂಕವನ್ನು ತಡೆದುಕೊಳ್ಳುವಷ್ಟು ಸದೃಢವಾದ ವೇದಿಕೆಯನ್ನು ನಿರ್ಮಿಸಬೇಕು. ದುರ್ಬಲವಾದ ವೇದಿಕೆಯಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರೆ ಹೆಚ್ಚಿನ ಭಾರದಿಂದ ವೇದಿಕೆ ಕುಸಿದು ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ವಿಸರ್ಜನೆ ಸಂದರ್ಭದಲ್ಲೂ ಎಚ್ಚರಿಕೆ

ಕೆರೆ, ನದಿ ಸೇರಿದಂತೆ ಆಳವಾದ ಅಥವಾ ಅಪಾಯಕಾರಿಯಾದ ಸ್ಥಳಗಳಲ್ಲಿ ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನು ವಿಸರ್ಜಿಸುವುದು ಅಪಘಾತಕ್ಕೆ ಕಾರಣವಾಗಬಹುದು. ಹೀಗಾಗಿ ವಿಸರ್ಜನೆ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಎಸ್‌ಪಿ ಯಶೋಧಾ ವಂಟಗೋಡಿ ಅವರು ಮನವಿ ಮಾಡಿದ್ದಾರೆ.

ನಿಯಮ ಉಲ್ಲಂಘಿಸಿದರೆ ಆಯೋಜಕರೇ ಹೊಣೆ

ಗಣೇಶೋತ್ಸವದ ಸಂದರ್ಭದಲ್ಲಿ ದೊಡ್ಡ ಗಾತ್ರದ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಯಾವುದೇ ರೀತಿಯ ಅವಘಡ ಸಂಭವಿಸಿದರೆ, ಆಯೋಜಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ನಿಯಮಾನುಸಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

6 ಅಡಿ ಅಗಲ, 10 ಅಡಿ ಎತ್ತರ ಮೀರದಂತೆ

ಗಣೇಶ ಮೂರ್ತಿಯನ್ನು ಸಾಗಿಸುವ ವಾಹನವನ್ನು ಒಳಗೊಂಡಂತೆ ಗರಿಷ್ಠ 6 ಅಡಿ ಅಗಲ ಹಾಗೂ 10 ಅಡಿ ಎತ್ತರವನ್ನು ಮೀರದಂತೆ ಗಣೇಶ ಮೂರ್ತಿ ಮತ್ತು ಅಲಂಕಾರ ವ್ಯವಸ್ಥೆ ಇರುವಂತೆ ನೋಡಿಕೊಳ್ಳುವಂತೆ ಪೊಲೀಸ್ ಇಲಾಖೆ ಸೂಚಿಸಿದೆ.

ಗಣೇಶೋತ್ಸವ ಭಕ್ತಿಯ ಹಬ್ಬವಾಗಿದ್ದು, ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಆದ್ಯತೆ ನೀಡಿ ಹಬ್ಬವನ್ನು ಆಚರಿಸಬೇಕು. ಅತಿಯಾದ ಗಾತ್ರದ ಮೂರ್ತಿಗಳಿಂದ ಅಪಾಯಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಎಸ್‌ಪಿ ಯಶೋಧಾ ವಂಟಗೋಡಿ IPS ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಸಾರ್ವಜನಿಕರಿಗೆ ಸಂದೇಶ ನೀಡಿದ್ದಾರೆ.

“ಸಂಭ್ರಮದ ಗಣೇಶೋತ್ಸವವಾಗಲಿ; ಅಪಾಯದ ಹಬ್ಬವಾಗದಿರಲಿ” ಎಂಬ ಆಶಯದೊಂದಿಗೆ ಸುರಕ್ಷಿತವಾಗಿ ಹಬ್ಬ ಆಚರಿಸುವಂತೆ ಅವರು ಮನವಿ ಮಾಡಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page