6

ವಿಜಯೇಂದ್ರ–ಯತ್ನಾಳ್ ಭೇಟಿ ವಿಚಾರ: ಬೊಮ್ಮಾಯಿ ಹೇಳಿದ್ದೇನು?

ಸ್ಟಿಂಗ್ ಪ್ರಕರಣ ಸಿಬಿಐ ತನಿಖೆಯಾಗಲಿ; ಬಿಜೆಪಿ ಒಗ್ಗಟ್ಟಿನಿಂದ ಹೋದರೆ ದೊಡ್ಡ ಗೆಲುವು: ಬಸವರಾಜ ಬೊಮ್ಮಾಯಿ

ಹಾವೇರಿ: ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಪೈಪೋಟಿ ಮಾತ್ರ ಇರುತ್ತದೆ. ಬಿಜೆಪಿ ನಾಯಕರು ಒಗ್ಗಟ್ಟಿನಿಂದ ಒಂದೇ ಧ್ವನಿಯಾಗಿ ಮುನ್ನಡೆದರೆ ಪಕ್ಷ ದೊಡ್ಡ ವಿಜಯ ಸಾಧಿಸಬಹುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಭೇಟಿಯ ಕುರಿತು ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ. ಪೈಪೋಟಿ ಇರುವುದು ಸಹಜ. ಹೀಗಾಗಿ ನಾಯಕರು ಒಗ್ಗಟ್ಟಿನಿಂದ ಸಾಗುವುದು ಉತ್ತಮ ಬೆಳವಣಿಗೆ ಎಂದರು.

ಬಿಜೆಪಿ ಕಾರ್ಯಕರ್ತರ ಅಭಿಪ್ರಾಯವೂ ಇದೇ ಆಗಿದ್ದು, ಎಲ್ಲರೂ ಒಂದಾಗಿ ಒಂದೇ ಧ್ವನಿಯಲ್ಲಿ ಮುನ್ನಡೆದರೆ ಪಕ್ಷಕ್ಕೆ ದೊಡ್ಡ ವಿಜಯ ಸಿಗಬಹುದು. ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಬೆಳವಣಿಗೆಗಳನ್ನು ನಿರೀಕ್ಷಿಸುತ್ತೇನೆ. ಈಶ್ವರಪ್ಪ ಸೇರಿದಂತೆ ಎಲ್ಲ ನಾಯಕರ ವಿಚಾರದಲ್ಲಿಯೂ ಇದೇ ಅಭಿಪ್ರಾಯ ಹೊಂದಿದ್ದೇನೆ ಎಂದು ಹೇಳಿದರು.

ಸ್ಟಿಂಗ್ ಪ್ರಕರಣ: ಸಿಬಿಐ ತನಿಖೆಗೆ ಬೊಮ್ಮಾಯಿ ಒತ್ತಾಯ

ಸ್ಟಿಂಗ್ ಪ್ರಕರಣದಲ್ಲಿ ಮಹಾನಾಯಕನ ಪಾತ್ರವಿದೆ ಎಂಬ ರಾಜಕೀಯ ಚರ್ಚೆ ಕುರಿತು ಮಾತನಾಡಿದ ಬೊಮ್ಮಾಯಿ, ಕೇವಲ ಹೇಳಿಕೆಗಳಿಂದ ಸತ್ಯಾಂಶ ತಿಳಿಯುವುದಿಲ್ಲ. ಪ್ರಕರಣದ ಕುರಿತು ಗಂಭೀರ ಹಾಗೂ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ನಡೆಯುತ್ತಿರುವ ತನಿಖೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಪ್ರಕರಣದ ಸಂಪೂರ್ಣ ಸತ್ಯ ಹೊರಬರಬೇಕಾದರೆ ಸ್ವತಂತ್ರ ತನಿಖೆ ಅಗತ್ಯ. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಪೊಲೀಸರಿಂದ ಸ್ವತಂತ್ರ ತನಿಖೆ ಸಾಧ್ಯವೇ ಎಂಬ ಪ್ರಶ್ನೆ ಎತ್ತಿದ ಅವರು, ಈ ಹಿಂದೆ ನಡೆದ ಎಸ್‌ಐಟಿ ತನಿಖೆಗಳ ಕುರಿತು ಜನರಲ್ಲಿ ವಿಶ್ವಾಸದ ಕೊರತೆಯಿದೆ ಎಂದು ಹೇಳಿದರು. ಎಸ್‌ಐಟಿ ತನಿಖೆ ನಡೆಸಿದರೆ ಪೊಲೀಸರು ಒತ್ತಡಕ್ಕೆ ಒಳಗಾಗುವ ಸಾಧ್ಯತೆಯಿದೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ರಾಜಕೀಯ ನಡೆ ಕುರಿತು ಹಲವು ಪ್ರಶ್ನೆಗಳು

ಸ್ಟಿಂಗ್ ಪ್ರಕರಣವು ಸಿದ್ದರಾಮಯ್ಯ ಅವರು ಅಧಿಕಾರದಿಂದ ಕೆಳಗಿಳಿಯುವ ವಿಚಾರಕ್ಕೆ ಕಾರಣವಾಗಿರಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಈ ವಿಚಾರ ಮುನ್ನೆಲೆಗೆ ಬಂದ ನಂತರ ಸಿದ್ದರಾಮಯ್ಯ ಅವರು ಬಹಿರಂಗವಾಗಿ ಹೆಚ್ಚಿನ ಪ್ರತಿಕ್ರಿಯೆ ನೀಡಿಲ್ಲ ಎಂದರು.

ಸಿದ್ದರಾಮಯ್ಯ ಅವರ ಮನದಾಳದ ಮಾತುಗಳು ಏನಿವೆ ಎಂಬುದನ್ನು ಸೂಕ್ತ ಸಮಯದಲ್ಲಿ ಅವರೇ ಜನರ ಮುಂದೆ ಇಡಲಿದ್ದಾರೆ. ಅವರು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಹಿಂದಿನ ರಾಜಕೀಯ ನಡೆಗಳನ್ನು ಗಮನಿಸಿದರೆ ಅವರು ಯಾವಾಗಲೂ ತಮ್ಮದೇ ರೀತಿಯಲ್ಲಿ ರಾಜಕೀಯ ಮಾಡಿದ್ದಾರೆ. ಅವರು ಅಧಿಕಾರ ಹಸ್ತಾಂತರಿಸಿದ ರೀತಿ ಹಾಗೂ ಮುಖ್ಯಮಂತ್ರಿಗಳೇ ಸ್ಟಿಂಗ್ ಪ್ರಕರಣದ ವಿಚಾರವನ್ನು ಪ್ರಸ್ತಾಪಿಸಿರುವುದನ್ನು ಒಟ್ಟಾಗಿ ನೋಡಿದಾಗ ಹಲವು ಪ್ರಶ್ನೆಗಳು ಉದ್ಭವಿಸುತ್ತವೆ. ಈ ಎಲ್ಲ ಪ್ರಶ್ನೆಗಳಿಗೆ ತನಿಖೆಯಿಂದಲೇ ಉತ್ತರ ಸಿಗಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Related Posts

ಅ. 22 ಮತ್ತು 23ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

Share this… Facebook Pinterest Twitter Linkedin Whatsapp*ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆ ಮತಗಟ್ಟೆ ಸ್ಥಾಪನೆ ಮಾಡಿದ ಶಾಲಾ – ಕಾಲೇಜುಗಳಿಗೆ ರಜೆ* ಹಾವೇರಿ : ಅ.21: ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆಯ ಮತದಾನವು ದಿನಾಂಕ 23.10.2026 ರಂದು…

ಹಾವೇರಿಯಲ್ಲಿ ಪೊಲೀಸ್ ಹುತಾತ್ಮರಿಗೆ ಗೌರವ ನಮನ

Share this… Facebook Pinterest Twitter Linkedin Whatsappಕರ್ತವ್ಯದಲ್ಲಿ ಪ್ರಾಣಾರ್ಪಣೆ ಮಾಡಿದ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ತ್ಯಾಗ ಸ್ಮರಣೀಯ: ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಎಂ.ಜಿ. ಶಿವಳ್ಳಿ ಅಭಿಮತ *ಕಾಕಿ ಸಮವಸ್ತ್ರ ಕೇವಲ ಉದ್ಯೋಗದ ಸಂಕೇತವಲ್ಲ, ಅದು ಕರ್ತವ್ಯ, ಶಿಸ್ತು ಮತ್ತು…

You cannot copy content of this page