ಅಡಿಕೆ ಅವ್ಯವಹಾರ ವಿಷಯದಲ್ಲಿ ರೈತರು ನೀಡಿದ ದೂರು ದಾಖಲಿಸಿಕೊಂಡಿರುವ ಪೊಲೀಸರು ಶನಿವಾರ ಯಲ್ಲಾಪುರ ಟಿಎಸ್‌ಎಸ್ ಅಂಗಳಕ್ಕೆ ಧಾವಿಸಿದ್ದು, ಸ್ಥಳ ಪರಿಶೀಲನೆ ನಡೆಸಿ ಮಹಜರು ನಡೆಸಿದರು. ರೈತರು ಹಾಗೂ ಟಿಎಸ್‌ಎಸ್ ನೌಕರರ ನಡುವೆ ಮಾತುಕಥೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದರು.
ಶಿರಸಿ ಬಿಳೂರು ಮಂಜುನಾಥ ನಾಯ್ಕ ಎಂಬಾತರು ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹಾಗೂ ನಿರ್ದೇಶಕರಾದ ಹಳವಳ್ಳಿಯ ಸಂತೋಷ ವಿ ಭಟ್ಟ, ಜೂಜನಬೈಲಿನ ಕೃಷ್ಣ ಗಣಪತಿ ಹೆಗಡೆ, ಶಿರಸಿಯ ಗಿರಿಶ್ ಚಿದಾನಂದ ಹೆಗಡೆ, ಚಿಪಗಿಯ ರವಿ ಲಕ್ಷ್ಮೀನಾರಾಯಣ ಹೆಗಡೆ ವಿರುದ್ಧ ದೂರು ದಾಖಲಿಸಿದ್ದರು. ಈ ಪ್ರಕರಣದ ಪಂಚನಾಮೆಗಾಗಿ ಬೆಳಗ್ಗೆ 10 ಗಂಟೆಗೆ ಪೊಲೀಸ್ ಠಾಣೆಗೆ ಆಗಮಿಸಿದ ದೂರುದಾರರು ಪೊಲೀಸರ ಜೊತೆ ಎಪಿಎಂಸಿಗೆ ತೆರಳಿದರು. ಅಲ್ಲಿಂದ ಮುಂದೆ ಟಿಎಸ್‌ಎಸ್ ಅಡಿಕೆ ಅಂಗಳಕ್ಕೆ ಹೋದ ಅವರು ಜುಲೈ 22ರಂದು ನಡೆದ ಘಟನಾವಳಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಅಡಿಕೆ ಅಂಗಳ, ಅಡಿಕೆ ವಹಿವಾಟು, ತಾವು ತಂದ ಅಡಿಕೆ ಹಾಗೂ ಅಡಿಕೆಯನ್ನು ಇರಿಸಿದ ಸ್ಥಳದ ಬಗ್ಗೆ ದೂರುದಾರರು ಪೊಲೀಸರಿಗೆ ತಿಳಿಸಿದರು. ಅಡಿಕೆ ಮಾರಾಟಕ್ಕೆ ತಂದ ರಸೀದಿ ಹಾಗೂ ಮಾರಾಟದ ನಂತರ ದೊರೆತ ರಸಿದಿಯನ್ನು ಪ್ರದರ್ಶಿಸಿದರು.
ಅಡಿಕೆ ಮಾರಾಟದ ನಂತರ ಸಾರ್ವಜನಿಕ ಪ್ರಕಟಣೆ ನೀಡುವ ನೋಟಿಸ್ ಬೋರ್ಡ ತೋರಿಸಿ, ಅಲ್ಲಿರುವ ಮಾಹಿತಿಗಳ ಬಗ್ಗೆ ವಿವರಿಸಿದರು. ಈ ವೇಳೆ ಪೊಲೀಸರು ಸಂಸ್ಥೆಯ ನೌಕರರನ್ನು ಕರೆದು ಅವರಿಂದಲೂ ವಿವಿಧ ಮಾಹಿತಿ ಪಡೆದರು. ವಿವಿಧ ದಾಖಲೆಗಳನ್ನು ಪೊಲೀಸರು ಈ ವೇಳೆ ಪರಿಶೀಲನೆ ನಡೆಸಿದ್ದು ಮಹತ್ವದ ಸಾಕ್ಷಿಗಳನ್ನು ಸಂಗ್ರಹಿಸಿದರು. ಶನಿವಾರ ಅಡಿಕೆ ವ್ಯಾಪಾರ ಇರಲಿಲ್ಲ. ಸೋಮವಾರದ ವ್ಯಾಪಾರಕ್ಕಾಗಿ ತೆಗೆಯುವ ಅಡಿಕೆ ಮೂಟೆಗಳನ್ನು ರಾಶಿ ಹಾಕಲಾಗಿತ್ತು. ಇದಾದ ನಂತರ ಪೊಲೀಸ್ ಠಾಣೆಗೆ ಹೋದ ದೂರುದಾರರು ಲಿಖಿತ ಹೇಳಿಕೆ ನೀಡಿದರು. ಅವರ ಜೊತೆ ಸಾಕ್ಷಿದಾರರು ಸಹ ತಮ್ಮ ಹೇಳಿಕೆ ದಾಖಲಿಸಿದರು. ಶನಿವಾರದ ಪಂಚನಾಮೆ ನಡೆಸಿದ ಕುರಿತು ನ್ಯಾಯಾಲಯಕ್ಕೆ ಸಲ್ಲಿಸಲು ಪೊಲೀಸರು ಫೋಟೋ-ವಿಡಿಯೋ ಮಾಡಿಕೊಂಡಿದ್ದು, ಅಂದಿನ ಘಟನಾವಳಿಗಳ ಬಗ್ಗೆ ಎಪಿಎಂಸಿಯಿoದ ಸಹ ಮಾಹಿತಿ ಪಡೆಯುವ ಬಗ್ಗೆ ದೂರುದಾರರಿಗೆ ತಿಳಿಸಿದರು.
ಅಡಿಕೆ ವಿಷಯದಲ್ಲಿ ಅವ್ಯವಹಾರ ಕುರಿತು ಪ್ರಕಟವಾಗಿದ್ದ ವರದಿ ಇಲ್ಲಿ ಓದಿ..








