ಅನಾರೋಗ್ಯಕ್ಕೆ ಒಳಗಾದ ಭಿಕ್ಷುಕಿಯಿಂದ ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ 540ರೂ ಹಣ ಪಡೆದಿದ್ದು, ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಕೆಯಾದ ನಂತರ ಈ ಹಣವನ್ನು ವೈದ್ಯರು ಚೆಕ್ ಮೂಲಕ ಮರಳಿಸಿದ್ದಾರೆ.
ನಿಯಮಗಳ ಪ್ರಕಾರ ಭಿಕ್ಷುಕರು ಹಾಗೂ ಅನಾಥರಿಗೆ ಉಚಿತ ಚಿಕಿತ್ಸೆ ನೀಡಬೇಕಿದ್ದು, ಅದಾಗಿಯೂ ಕುಮಟಾದ ರೇಣುಕಾ ಗೌಡ ಎಂಬಾತರಿoದ ಇಸಿಜಿ ಹಾಗೂ ಇನ್ನಿತರ ಚಿಕಿತ್ಸೆಗೆ ಆಸ್ಪತ್ರೆ ಸಿಬ್ಬಂದಿ 540ರೂ ಪಡೆದಿದ್ದರು. ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಆಗ್ನೇಲ್ ರೋಡ್ರಿಗ್ಸ ಹಾಗೂ ಸುಧಾಕರ್ ನಾಯ್ಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅವರೇ ಹಣ ಪಾವತಿಸಿದ್ದರು. ಈ ವೇಳೆ ಸರ್ಕಾರದ ಉಚಿತ ಚಿಕಿತ್ಸೆಯ ಘೋಷಣೆ ಇದ್ದರೂ ಹಣ ಪಡೆದ ಬಗ್ಗೆ ಅವರು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು.
ದೂರಿನ ವಿಚಾರಣೆ ನಡೆಸಿದ ಆಯೋಗ ಪಡೆದ ಹಣವನ್ನು ಮರಳಿಸುವಂತೆ ಜಿಲ್ಲಾ ಆಸ್ಪತ್ರೆಗೆ ಸೂಚಿಸಿದ್ದು, ಅದರ ಪ್ರಕಾರ ಸೆ 27ರಂದು 540ರೂ ಮೌಲ್ಯದ ಚೆಕ್’ನ್ನು ಆ ವೇಳೆ ಹಣ ಪಾವತಿಸಿದ ಆಗ್ನೇಲ್ ರೋಡ್ರಿಗ್ಸ ಅವರ ವಿಳಾಸಕ್ಕೆ ವೈದ್ಯಾಧಿಕಾರಿಗಳು ಕಳುಹಿಸಿದ್ದಾರೆ.




