ಕಾರವಾರದ ಸೀಬರ್ಡ ನೌಕಾನೆಲೆ ವ್ಯಾಪ್ತಿಯಲ್ಲಿ ಡ್ರೋಣ್ ಹಾರಾಟ ನಡೆದಿದೆ. ಆದರೆ, ಈ ಡ್ರೋಣ್ ಹಾರಿಸಿದವರು ಯಾರು ಎಂದು ಯಾರಿಗೂ ಗೊತ್ತಾಗಿಲ್ಲ. ಸ್ಥಳೀಯರು ಮಾಹಿತಿ ನೀಡುವವರೆಗೂ ಅಲ್ಲಿನ ಭದ್ರತಾ ಸಿಬ್ಬಂದಿಗೆ ಸಹ ಡ್ರೋಣ್ ಹಾರಾಟದ ವಿಷಯ ಅರಿವಿರಲಿಲ್ಲ!
ಸ್ಥಳೀಯರೊಬ್ಬರು ದಾಖಲೆಗಳ ಜೊತೆ ಮಾಹಿತಿ ನೀಡಿದ ಕಾರಣ ಭದ್ರತಾ ಸಿಬ್ಬಂದಿ ಸಹ ಇದೀಗ ತಲೆಕೆಡಿಸಿಕೊಂಡಿದ್ದಾರೆ. ಮೊನ್ನೆ ಸುಮಾರು 2 ತಾಸುಗಳ ಕಾಲ ನೌಕಾನೆಲೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಡ್ರೋಣ್ ಹಾರಾಟ ನಡೆದಿದ್ದು, ಅದರ ವಿಡಿಯೋ ಸ್ಥಳೀಯರ ಮೊಬೈಲಿನಲ್ಲಿ ಸೆರೆಯಾಗಿದೆ.
ನೌಕಾನೆಲೆ ವ್ಯಾಪ್ತಿಯಲ್ಲಿ ಡ್ರೋಣ್ ಸಂಚಾರಕ್ಕೆ ಅವಕಾಶವಿಲ್ಲ. ದೇಶದ ಭದ್ರತೆಗಾಗಿ ಈ ಭಾಗದಲ್ಲಿ ಡ್ರೋಣ್ ಹಾರಿಸುವುದನ್ನು ನಿಷೇಧಿಸಲಾಗಿದೆ. ಅದಾಗಿಯೂ ಅರಗಾದ ವಕ್ಕನಳ್ಳಿ ಭಾಗದಲ್ಲಿ ಡ್ರೋಣ್ ಹಾರಾಟ ನಡೆಸಿದೆ. ಐಎನ್‌ಎಸ್ ಪತಂಜಲಿ ಆಸ್ಪತ್ರೆಯಿಂದ ಹಿಡಿದು ಸುರಂಗ ಮಾರ್ಗದವರೆಗೂ ಡ್ರೋಣ್ ಹಾರಾಟ ನಡೆಸಿದೆ. ರಾತ್ರಿ ವೇಳೆ ಈ ಡ್ರೋಣ್ ಹಾರಿಸಿದವರು ಯಾರು? ಯಾವ ಉದ್ದೇಶಕ್ಕಾಗಿ ಡ್ರೋಣ್ ಹಾರಿಸಲಾಯಿತು? ಎಂಬ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸುತ್ತಿದೆ.
ಈ ಭಾಗದಲ್ಲಿ ಅರಣ್ಯ ಪ್ರದೇಶವೂ ಇದ್ದು ಅರಣ್ಯ ಇಲಾಖೆಯವರು ಡ್ರೋಣ್ ಹಾರಾಟ ನಡೆಸಿಲ್ಲ. ಹೆದ್ದಾರಿ ಅಭಿವೃದ್ಧಿ ಕೆಲಸ ಮಾಡುತ್ತಿರುವವರೂ ಡ್ರೋಣ್ ಹಾರಿಸಿಲ್ಲ ಎಂದಿದ್ದಾರೆ. ಹೀಗಾಗಿ ಹೆದ್ದಾರಿ ಮೇಲೆ ಸಂಚರಿಸುವ ವಾಹನದವರು ಈ ಡ್ರೋಣ್ ಹಾರಿಸಿದ ಅನುಮಾನ ಹೆಚ್ಚಾಗಿದೆ. ರಸ್ತೆ ಅಂಚಿನಲ್ಲಿಯೇ ಬಹುತೇಕ ಡ್ರೋಣ್ ಹಾರಾಟ ನಡೆದಿರುವುದು ಈ ಅನುಮಾನಕ್ಕೆ ಪುಷ್ಠಿ ನೀಡಿದೆ.
ಪ್ರಸ್ತುತ ನೌಕಾ ಅಧಿಕಾರಿಗಳ ಜೊತೆ ಗುಪ್ತಚರ ಇಲಾಖೆ ಸಹ ಡ್ರೋಣ್ ಹಾರಾಟದ ಬಗ್ಗೆ ತನಿಖೆ ನಡೆಸುತ್ತಿದೆ.




