ಅಂಕೋಲಾ: ಹಾರವಾಡ ಗ್ರಾ ಪಂ ಚುನಾವಣೆ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ವಿಷಯವಾಗಿ ಗ್ರಾ ಪಂ ಸದಸ್ಯರು ಆಣೆ-ಪ್ರಮಾಣ ಮಾಡಿದ ವಿಡಿಯೋ ವೈರಲ್ ಆಗಿದೆ.
ದುರ್ಗಾದೇವಿ ಆಲಯಕ್ಕೆ ಬರುವ ಗ್ರಾ ಪಂ ಸದಸ್ಯರು ಅಧ್ಯಕ್ಷ ಆಕಾಂಕ್ಷಿ ಬಳಿ `ನಿಮಗೆ ಮತ ಹಾಕುವೆ’ ಎಂದು ದೇವರ ಮುಂದೆ ಆಣೆ ಮಾಡಿದ್ದಾರೆ. ದೇವಾಲಯದಲ್ಲಿ ಸರತಿ ಸಾಲಿನಲ್ಲಿ ಬಂದು ಆಣೆ-ಪ್ರಮಾಣ ಮಾಡುತ್ತಿರುವ ವಿಡಿಯೋ ಇದೀಗ ಹರಿದಾಡುತ್ತಿದೆ. ಕೆಲವರು ಈ ವಿಡಿಯೋ `ಮೊದಲ ಅವಧಿಗೆ ಸೇರಿದ್ದು’ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಇದು `ಮೊನ್ನೆ ನಡೆದ ಘಟನೆ’ ಎನ್ನುತ್ತಿದ್ದಾರೆ. ಆದರೆ, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕಾಗಿ ಕೆಲವರು ಸದಸ್ಯರಿಂದ ಆಣೆ-ಪ್ರಮಾಣ ಮಾಡಿಸಿದಂತೂ ಸತ್ಯ!
ಅಕ್ಟೋಬರ್ 15ರಂದು ಹಾರವಾಡ ಗ್ರಾಮ ಪಂಚಾಯತ್ ಅಧ್ಯಕ್ಷರ ಆಯ್ಕೆಯ ನಿಮಿತ್ತ ಚುನಾವಣೆ ನಡೆದಿತ್ತು. ಮಹಿಳಾ ಅಭ್ಯರ್ಥಿಗೆ ಮೀಸಲಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಮೋಹಿನಿ ಏಕನಾಥ ಗೌಡ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಮಲ್ಲಿಕಾ ಬಲೆಗಾರ ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಮೋಹಿನಿ ಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ಹಿಂದೆಯೂ ಮಲ್ಲಿಕಾ ಬಲೆಗಾರ ಬಿಜೆಪಿ ಬೆಂಬಲಿತರಾಗಿ ಸ್ಪರ್ಧೆಗೆ ಇಳಿದಿದ್ದರು. ಈಗ ಆಯ್ಕೆಯಾದ ಮೋಹಿನಿ ಗೌಡ ಅವರ ತಂಡದ ಸದಸ್ಯರೊಬ್ಬರು ಮಲ್ಲಿಕಾ ವಿರುದ್ಧ ಸ್ಪರ್ಧಿಸಿ ವಿಜೇತರಾಗಿದ್ದರು.



