ಊರ ಬದಿಯ ಹಳ್ಳಕ್ಕೆ ಬಂದ ಕಡವೆಯನ್ನು ನಾಯಿಗಳು ಬೆನ್ನಟ್ಟಿದ್ದು, ಹಳ್ಳದ ನೀರಿನಲ್ಲಿ ನಿಂತ ಕಡವೆ ಪ್ರತಿದಾಳಿಯ ಮುನ್ನಚ್ಚರಿಕೆ ನೀಡಿ ನಾಯಿ ಬೆದರಿಸಿದೆ. ಇಂಥ ಅಪರೂಪದ ವಿಡಿಯೋ ಸ್ಥಳೀಯರ ಮೊಬೈಲಿನಲ್ಲಿ ಸೆರೆಯಾಗಿದೆ.
ನಾಯಿಗಳು ಬೊಗಳಿದರೂ ಅಂಜದ ಕಡವೆ ಎರಡು ಬಾರಿ ತನ್ನ ಬಲಗಾಲನ್ನು ಎತ್ತಿ ನೆಲಕ್ಕೆ ಕುಟ್ಟಿದೆ. ಜೊತೆಗೆ ಮುಂದಿದ್ದ ಮೊಬೈಲ್ ಕ್ಯಾಮರಾಗೆ ಚಂದದ ಫೋಸು ನೀಡಿ ಆಕಳಿಸಿದೆ. ಹೊನ್ನಾವರ ಮಂಕಿ ಗ್ರಾಮದ ಚಿತ್ತಾರ ಬಳಿ ಕಡವೆ ಆಗಮಿಸಿದ್ದು, ಅಲ್ಲಿನ ನಾಯಿಗಳು ಆ ಪ್ರಾಣಿಯ ಬೆನ್ನಟ್ಟಿದ್ದವು. ಹಳ್ಳದ ನೀರು ತಲುಪಿದ ಕಡವೆ ಅಲ್ಲಿ ದಾಹ ತೀರಿಸಿಕೊಂಡ ನಂತರ ನಾಯಿಗೆ ಎದುರಾಗಿ ನಿಂತಿದೆ. ತೋಟದ ಅಂಚಿನ ವಾತಾವರಣದಲ್ಲಿ ನಿಂತ ಕಡವೆಗೆ ನಾಯಿಗಳು ಸುತ್ತುವರೆದರೂ ಆ ಕಾಡು ಪ್ರಾಣಿ ಅಳುಕಲಿಲ್ಲ.
ಬದಲಾಗಿ ತನ್ನ ಕಾಲುಗಳನ್ನು ಹಿಮ್ಮೆಟ್ಟಿಸಿ ಪ್ರತಿದಾಳಿಯ ಮುನ್ಸೂಚನೆ ನೀಡಿ ನಾಯಿಗಳನ್ನು ಕಡವೆ ಬೆದರಿಸಿತು. ಇದನ್ನು ನೋಡಿದ ಸ್ಥಳೀಯರು ನಾಯಿಗಳನ್ನು ಓಡಿಸಿ ಕಡವೆಯನ್ನು ತನ್ನಷ್ಟಕ್ಕೆ ತಾನು ಮೇಯಲು ಬಿಟ್ಟರು. ತೋಟವನ್ನೆಲ್ಲ ತಿರುಗಾಡಿದ ಕಡವೆ ನಂತರ ಕಾಡಿಗೆ ಮರಳಿತು.
ನಾಯಿಗೆ ಬೆದರದ ಕಡವೆ ನೀರಾಟವಾಡಿದ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..