ಜನರ ಜೀವನಾಡಿಯಾಗಿರುವ ಅಡಿಕೆ ಬೆಳೆಗೆ ಈ ವರ್ಷ ಮೊದಲಿನ ಫಸಲಿಲ್ಲ. ಅಡಿಕೆ ದರವೂ ಏರಿಕೆ ಕಾಣುತ್ತಿಲ್ಲ. ಈ ನಡುವೆ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿರುವುದು ಅಡಿಕೆ ಬೆಳೆಗಾರರನ್ನು ಕೆಂಗಡಿಸಿದೆ. ಮೂರು ಬಾರಿ ಮದ್ದು ಹೊಡೆದರೂ ತಿಂಗಳು ಕಳೆಯುವ ಮುನ್ನವೆ ಅಡಕೆಗೆ ಕೊಳೆ ರೋಗ ಆವರಿಸಿರುವುದರಿಂದ ಬೆಳೆಗಾರರು ತಲೆಮೇಲೆ ಕೈ ಹೊತ್ತು ಕೂರಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಜೋರಾದ ಮಳೆ ಸುರಿಯುತ್ತಿದೆ. ಬೆಳಗ್ಗಿನ ಅವಧಿಯಲ್ಲಿ ಬಿಸಿಲು ಕಾಣಿಸಿಕೊಂಡರೆ, ಮಧ್ಯಾಹ್ನದ ನಂತರ ಧಾರಾಕಾರ ಮಳೆ ಸುರಿಯುತ್ತಿದೆ. ಬಿಸಿಲು-ಮಳೆ ಅಬ್ಬರಕ್ಕೆ ವಾಣಿಜ್ಯ ಬೆಳೆಯಾದ ಅಡಿಕೆಗೆ ರೋಗ ಆವರಿಸಿದೆ. ಎಲೆಚುಕ್ಕಿ ರೋಗ, ಹಳದಿ ರೋಗಗಳ ನಡುವೆ ಅನಾಧಿಕಾಲದಿಂದಲೂ ಕಾಡುತ್ತಿರುವ ಕೊಳೆ ರೋಗವೂ ಈ ಬಾರಿ ವ್ಯಾಪಕವಾಗಿದೆ. ಅಕ್ಟೋಬರ್ ಅಂತ್ಯ ಸಮೀಪಿಸಿದರೂ ಮಳೆಗಾಲ ಮಾತ್ರ ಕಡಿಮೆಯಾಗದಿರುವುದು ಅನೇಕರ ತಲೆಬಿಸಿಗೆ ಕಾರಣವಾಗಿದೆ.
ಸುರಿದ ಮಳೆಯಿಂದ ಹಲವು ಕಡೆ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ವಾಣಿಜ್ಯ ಬೆಳೆ ಅಡಿಕೆ, ಆಹಾರ ಬೆಳೆ ಭತ್ತಕ್ಕೂ ಈ ಮಳೆ ತೊಂದರೆ ಕೊಡುತ್ತಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನ ತೊಂದರೆಗೆ ಸಿಲುಕಿದ್ದಾರೆ. ಹಲವು ಕಡೆ ಮನೆ ಮುರಿತದ ಜೊತೆ ಮರ-ಗಿಡಗಳು ರಸ್ತೆಗೆ ಅಡ್ಡಲಾಗಿ ಬೀಳುತ್ತಿವೆ. ಗಾಳಿ-ಮಳೆಯ ರಭಸಕ್ಕೆ ತೋಟದಲ್ಲಿನ ಅಡಿಕೆ ಮರಗಳು ಸಹ ಮುರಿದು ಬೀಳುತ್ತಿವೆ. ಅನೇಕ ಕಡೆ ತೋಟಕ್ಕೆ ಹಾಕಿದ್ದ ಗೊಬ್ಬರವೂ ನೀರು ಪಾಲಾಗಿದೆ.