ಕಳೆದ ಎರಡು ದಿನಗಳಿಂದ ಚಿತ್ರ ನಟ ರಮೇಶ ಅರವಿಂದ ಉತ್ತರ ಕನ್ನಡ ಪ್ರವಾಸದಲ್ಲಿದ್ದಾರೆ. ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಅವರು ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ.
ಜೊಯಿಡಾ-ದಾಂಡೇಲಿಗೆ ತೆರಳಿದ ಅವರು ಅಲ್ಲಿನ ಹನಿಪಾರ್ಕ ವೀಕ್ಷಿಸಿದರು. ಜೇನು ನೊಣಗಳ ಮಹತ್ವ, ಅವುಗಳ ಕಾರ್ಯ ಹಾಗೂ ಜೇನು ತುಪ್ಪ ತಯಾರಾಗುವ ವಿಧಾನಗಳ ಬಗ್ಗೆ ಮಾಹಿತಿ ಪಡೆದರು. ಸಣ್ಣ ದುoಬಿಯ ಅಪಾರ ಕೆಲಸದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು. ಇದಾದ ನಂತರ ಜೇನು ತುಪ್ಪ ಸ್ವೀಕರಿಸಿ ಅದರ ಸ್ವಾದ ಅನುಭವಿಸಿದರು.
ಅದಾದ ನಂತರ ಅಲ್ಲಿಂದ ಕಾರವಾರಕ್ಕೆ ಹೊರಟ ರಮೇಶ್ ಅರವಿಂದ್ ಕಡಲ ತೀರ ಸಂಚಾರ ನಡೆಸಿದರು. ಮೀನುಗಾರರನ್ನು ಮಾತನಾಡಿಸಿ, ಅವರ ಬದುಕಿನ ಬಗ್ಗೆ ತಿಳಿದುಕೊಂಡರು. ದೇವಭಾಗ ಕಡಲ ತೀರಕ್ಕೆ ತೆರಳಿ ಸಮುದ್ರದ ಅಲೆಗಳೊಂದಿಗೆ ಆಟವಾಡಿದರು. ಅಲ್ಲಿ ಒಂದು ಹೊತ್ತಿನ ಊಟ ಮಾಡಿದ ಅವರು ಸಂಜೆ ಯಾಂತ್ರಿಕ ಬೋಟಿನ ಮೂಲಕ ಕೂರ್ಮಗಡಕ್ಕೆ ತೆರಳಿದರು.
ಸುತ್ತಲು ನೀರಿನಿಂದ ಕೂಡಿರುವ ಕೂರ್ಮಗಡದ ದ್ವೀಪದ ರೆಸಾರ್ಟಿನಲ್ಲಿ ಶುಕ್ರವಾರ ರಾತ್ರಿ ಕಳೆದರು. ಬೆಳಗ್ಗೆ ಅಲ್ಲಿನ ಸೌಂದರ್ಯಕ್ಕೆ ಮರುಳಾಗಿ ಫೋಟೋ ಶೂಟ್ ನಡೆಸಿದರು. ಉತ್ತರ ಕನ್ನಡ ಜಿಲ್ಲಾ ಪ್ರವಾಸದ ವೇಳೆ ಅವರು ಅನೇಕ ಬಗೆಯ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿದ್ದಾರೆ.