ಶಿರಸಿ: ರಾತ್ರಿ ವೇಳೆ ಕಳ್ಳಬಟ್ಟಿ ವ್ಯಾಪಾರ ನಡೆಸುತ್ತಿದ್ದ ನಾಗರಾಜ ನಾಯ್ಕ (45) ಮೊನ್ನೆ ಪೊಲೀಸರನ್ನು ಕಂಡು ಓಡಿ ಪರಾರಿಯಾಗಿದ್ದು, ಆತನ ಹುಡುಕಾಟ ನಡೆದಿದೆ. ಆತ ಇನ್ನೂ ಸಿಕ್ಕಿಲ್ಲ!
ಬನವಾಸಿ ಬಳಿಯ ಗೊಣ್ಣಗಟ್ಟದಲ್ಲಿ ವಾಸವಾಗಿರುವ ನಾಗರಾಜ ನಾರಾಯಣ ನಾಯ್ಕ ಬೆಳಗ್ಗಿನ ಅವಧಿಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ರಾತ್ರಿ ಅವಧಿಯಲ್ಲಿ ಕಳ್ಳಬಟ್ಟಿ ಸರಾಯಿ ಮಾಡುವುದನ್ನು ಕಾಯಕ ಮಾಡಿಕೊಂಡಿದ್ದ. ಅಕ್ಟೊಬರ್ 25ರಂದು ರಾತ್ರಿ 9.15ಕ್ಕೆ ಆತ ತನ್ನ ಮನೆಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಬಿಳಿ ಬಣ್ಣದ ಕ್ಯಾನ್ ಹಿಡಿದು ನಿಂತಿದ್ದ. 5 ಲೀಟರ್ ಕ್ಯಾನಿನ ಒಳಗೆ 3 ಲೀಟರ್ ಕಳ್ಳಬಟ್ಟಿ ಸರಾಯಿಯಿದ್ದು, ಅದರ ಮಾರಾಟಕ್ಕೆ ಗ್ರಾಹಕರನ್ನು ಹುಡುಕುತ್ತಿದ್ದ.
ಬನವಾಸಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಚಂದ್ರಕಲಾ ಪತ್ತಾರ್ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದರು. ಪೊಲೀಸರನ್ನು ನೋಡಿದ ತಕ್ಷಣ ಆತ ಕ್ಯಾನ್ ಅಲ್ಲಿಯೇ ಬಿಟ್ಟು ಓಡಿ ಪರಾರಿಯಾಗಿದ್ದು, ಬಿಳಿ ಬಣ್ಣದ ಕ್ಯಾನಿನ ಒಳಗೆ ಕಳ್ಳಬಟ್ಟಿ ಸರಾಯಿ ಇರುವುದನ್ನು ಪೊಲೀಸರು ದೃಢಪಡಿಸಿಕೊಂಡರು. ಅಂದಾಜು 1200ರೂ ಬೆಲೆಯ ಕಳ್ಳಬಟ್ಟಿ ಸರಾಯಿಯನ್ನು ವಶಕ್ಕೆ ಪಡೆದ ಪೊಲೀಸರು ನಾರಾಯಣ ನಾಯ್ಕ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.