ಸಿದ್ದಾಪುರ: ಸರ್ಕಾರಿ ಆಸ್ಪತ್ರೆಯ ಲಂಚಾವತಾರದ ವಿರುದ್ಧ ಸಾರ್ವಜನಿಕರು ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ವಿವಿಧ ವೈದ್ಯರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದರು.
`ಇಲ್ಲಿ ಕೆಲಸ ನಿರ್ವಹಿಸುವ ವೈದ್ಯರು-ಶ್ರುಶ್ರುಕಿಯರು ರೋಗಿಗಳನ್ನು ಸೌಜನ್ಯದಿಂದ ಕಾಣುವುದಿಲ್ಲ. ಕೆಲ ವೈದ್ಯರು ಸರ್ಕಾರಿ ಸೇವೆಯಲ್ಲಿದ್ದರೂ ಖಾಸಗಿ ಆಸ್ಪತ್ರೆ ಸ್ಥಾಪಿಸಿಕೊಂಡು ಅಲ್ಲಿ ಕಾಲ ಕಳೆಯುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ನಿತ್ಯ 30 ರೋಗಿಗಳನ್ನು ಭೇಟಿ ಮಾಡುವುದಿಲ್ಲ. ಆದರೆ, ತಮ್ಮ ಖಾಸಗಿ ಆಸ್ಪತ್ರೆಯಲ್ಲಿ ನೂರಾರು ಜನರಿಗೆ ಚಿಕಿತ್ಸೆ ನೀಡುತ್ತಾರೆ’ ಎಂದು ಪ್ರತಿಭಟನಾಕಾರರು ದೂರಿದರು.
`ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಬರುವ ಗರ್ಭಿಣಿಯರಿಂದ ಹಣ ಪಡೆಯುತ್ತಾರೆ. ಕಾಸು ಕೊಡದಿದ್ದರೆ ತೊಂದರೆ ಮಾಡುತ್ತಾರೆ’ ಎಂದು ದೂರಿದರು. ಈ ಬಗ್ಗೆ ಪ್ರಶ್ನಿಸಿದಾಗ `ನಾನು ದುಡ್ಡು ಕೊಟ್ಟು ಮೆಡಿಕಲ್ ಓದಿದ್ದು ಆ ದುಡ್ಡು ಹಿಂಪಡೆಯುವೆ’ ಎಂದಿರುವುದಾಗಿಯೂ ಆರೋಪಿಸಿದರು.
`ಸರ್ಕಾರಿ ಆಸ್ಪತ್ರೆಯಲ್ಲಿನ ವ್ಯವಸ್ಥೆಗಳು ಸರಿಯಾಗಿಲ್ಲ. ಸ್ಕಾನಿಂಗ್’ಗೆ ಬಂದವರನ್ನು ಸಾಗರಕ್ಕೆ ಕಳುಹಿಸಲಾಗುತ್ತದೆ. ಇಲ್ಲವಾದರೆ, ತಮ್ಮ ಖಾಸಗಿ ಆಸ್ಪತ್ರೆಗೆ ಬರುವಂತೆ ಆಮಂತ್ರಣ ನೀಡಲಾಗುತ್ತದೆ’ ಎಂದು ಆಕ್ರೋಶ ಹೊರಹಾಕಿದರು. ತಾಲೂಕಾ ವೈದ್ಯಾಧಿಕಾರಿ ಡಾ. ಪ್ರಕಾಶ ಪುರಾಣಿಕ್ ಸಮಸ್ಯೆ ಆಲಿಸಿ `ಒಂದು ವಾರದ ಒಳಗೆ ಎಲ್ಲವನ್ನು ಸರಿಪಡಿಸುವೆ’ ಎಂದು ಭರವಸೆ ನೀಡಿದರು.
ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ನಡೆದ ಪ್ರತಿಭಟನೆಯ ವಿಡಿಯೋ ಇಲ್ಲಿ ನೋಡಿ..