ಕಾರವಾರ: ಡಿಜಿಟಲ್ ಅರೆಸ್ಟ ಕುರಿತು ಉತ್ತರ ಕನ್ನಡ ಪೊಲೀಸರು ಸಾಕಷ್ಟು ಅರಿವು ಮೂಡಿಸುತ್ತಿದ್ದರೂ ಜನ ನಕಲಿ ಪೊಲೀಸರಿಗೆ ಕಾಸು ನೀಡಿ ಮೋಸ ಹೋಗುತ್ತಿದ್ದಾರೆ. ಕಾರವಾರದ ಮಾರುತಿ ದೇವಾಲಯ ಮುಖ್ಯರಸ್ತೆ ಬಳಿ ವಾಸವಾಗಿರುವ ವಿಲ್ಸನ್ ಫರ್ನಾಂಡಿಸ್ ಸಹ ನಕಲಿ ಪೊಲೀಸರ ಫೋನಿಗೆ ಹೆದರಿ 3.80 ಲಕ್ಷ ರೂ ಕಳೆದುಕೊಂಡಿದ್ದಾರೆ.
ಅಕ್ಟೊಬರ್ 24ರಂದು ವಿಲ್ಸನ್ ಫರ್ನಾಂಡಿಸ್ ಅವರಿಗೆ ಅಪರಿಚಿತ ಕರೆ ಬಂದಿದ್ದು, ಆ ಕಡೆಯಿಂದ ಮಾತನಾಡಿದ ವ್ಯಕ್ತಿ ತನ್ನನ್ನು ಮುಂಬೈ’ಯ `ಕೋರಿಯರ್ ಕಂಪನಿ ಪ್ರತಿನಿಧಿ’ ಎಂದು ಪರಿಚಯಿಸಿಕೊಂಡಿದ್ದಾನೆ. `ನಿಮ್ಮ ಹೆಸರಿನ ಪಾರ್ಸಲ್’ನಲ್ಲಿ ಡ್ರಗ್ಸ ಇದೆ. ಹೀಗಾಗಿ ಪೊಲೀಸ್ ದೂರು ಕೊಡುವೆ’ ಎಂದು ಬೆದರಿಸಿದ್ದಾನೆ. ಅದಾದ ನಂತರ ಆತ ಬೇರೆಯವರಿಗೆ ಕರೆ ವರ್ಗಾವಣೆ ಮಾಡಿದ್ದು, ಪೊಲೀಸ್ ಸಮವಸ್ತ ಧರಿಸಿದ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯಂಥಹ ಕೋಣೆಯಿಂದ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾನೆ.

ವಿಡಿಯೋ ಕಾಲ್’ನಲ್ಲಿ ಮಾತನಾಡಿದ ವ್ಯಕ್ತಿ ತನ್ನನ್ನು `ಮುಂಬೈ ಪೊಲೀಸ್’ ಎಂದು ಪರಿಚಯಿಸಿಕೊಂಡಿದ್ದು, ಫೋನ್ ಕರೆ ಕಡಿತ ಮಾಡಲು ಅವಕಾಶ ಕೊಟ್ಟಿಲ್ಲ. `ನಿಮ್ಮ ಹೆಸರಿನ ಪಾರ್ಸಲ್’ನಲ್ಲಿ 400 ಗ್ರಾಂ ಡ್ರಗ್ಸ್ ಸಿಕ್ಕಿದೆ. ಆನ್‌ಲೈನ್ ಮೂಲಕ ದೂರು ದಾಖಲಾಗಿದ್ದು, ವಿಚಾರಣೆ ಮುಗಿಯುವವರೆಗೂ ಫೋನ್ ಕಟ್ ಮಾಡುವ ಹಾಗಿಲ್ಲ’ ಎಂಬ ಸೂಚನೆ ನೀಡಿದ್ದಾನೆ. `ಮಾದಕ ವಸ್ತುಗಳ ಜೊತೆ ಪಾಸ್‌ಪೋರ್ಟ, ಬಟ್ಟೆ ಸೇರಿ ವಿವಿಧ ಸಾಮಗ್ರಿಗಳಿದೆ’ ಎಂದು ನಕಲಿ ಪೊಲೀಸ್ ಅಧಿಕಾರಿ ಹೇಳಿದ್ದು ವಿಲ್ಸನ್ ಫರ್ನಾಂಡಿಸ್ ಆತನ ಮಾತು ನಂಬಿದ್ದಾರೆ.
ಸುಮಾರು ಸಮಯದ ವಿಚಾರಣೆ ನಂತರ ನಕಲಿ ಪೊಲೀಸ್ ಅಧಿಕಾರಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಬೆದರಿದ ವಿಲ್ಸನ್ 380100ರೂ ಹಣವನ್ನು ಆತನ ಖಾತೆಗೆ ವರ್ಗಾಯಿಸಿದ್ದಾರೆ. ಇದಾದ ಹಲವು ದಿನಗಳ ನಂತರ `ಈ ರೀತಿ ಆಯಿತು’ ಎಂದು ವಿಲ್ಸನ್ ತನ್ನ ಸಹೋದರ
ರಾಫೆಲ್ ಫರ್ನಾಂಡಿಸ್ ಅವರಿಗೆ ಮಾಹಿತಿ ನೀಡಿದ್ದಾರೆ. `ಡಿಜಿಟಲ್ ಅರೆಸ್ಟ’ ಬಗ್ಗೆ ಮಾಹಿತಿಯಿದ್ದ ರಾಫೆಲ್ ಫರ್ನಾಂಡಿಸ್ ಇದೀಗ ಫೋನ್ ಕರೆ ಬಂದ ಮೊಬೈಲ್ ನಂ ಆಧರಿಸಿ ಪೊಲೀಸ್ ದೂರು ನೀಡಿದ್ದಾರೆ.
ಸೈಬರ್ ವಂಚನೆಗಳ ಬಗ್ಗೆ ನೀವು ಧೈರ್ಯದಿಂದ ದೂರು ಕೊಡಿ. ಇಲ್ಲಿ ಫೋನ್ ಮಾಡಿ: 1930



