ಯಲ್ಲಾಪುರ: ಸಂಪೂರ್ಣ ಹದಗೆಟ್ಟ ಬಿಸಗೋಡು ರಸ್ತೆ ದುರಸ್ಥಿಗಾಗಿ ನಡೆದ `ಜೋಳಿಗೆ ಅಭಿಯಾನ’ಕ್ಕೆ ಜನರ ಸ್ಪಂದನೆ ದೊರೆತಿದೆ. ಅದರಲ್ಲಿಯೂ ಆ ಭಾಗದ ಮಹಿಳೆಯರು ಉದಾರ ಮನಸ್ಸಿನಿಂದ ದೇಣಿಗೆ ನೀಡಿದ್ದಾರೆ. ಕೆಲವರು ತಮ್ಮ ಖಾತೆಗೆ ಜಮಾ ಆದ ಗೃಹಲಕ್ಷ್ಮಿ ಹಣವನ್ನು ರಸ್ತೆ ರಿಪೇರಿಗಾಗಿ ತೆಗೆದು ಕೊಟ್ಟಿದ್ದಾರೆ!
ಬಿಸಗೋಡಿಗೆ ತೆರಳುವ 2ಕಿಮೀ ರಸ್ತೆ ದುರಸ್ಥಿಗಾಗಿ ಊರಿನ ಜನ ಸ್ಥಳೀಯ ಆನಗೋಡು ಗ್ರಾಮ ಪಂಚಾಯತದಿoದ ಹಿಡಿದು ಶಾಸಕ-ಸಚಿವ-ಸಂಸದರವರೆಗೆ ಮನವಿ ಮಾಡಿದ್ದರು. ಆದರೆ, ಈ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಕಿಂಚಿತ್ತು ನೆರವು ಸಿಕ್ಕಿರಲಿಲ್ಲ. ಮಳೆಗಾಲದಲ್ಲಿನ ನೀರು ಹೊಂಡಗಳಲ್ಲಿ ತುಂಬಿದ ಕಾರಣ ಅಪಾಯ ಹೆಚ್ಚಿದ್ದು, ಸಾಕಷ್ಟು ಅಪಘಾತಗಳು ನಡೆದಿದ್ದವು. ಅಪಘಾತ ಪ್ರಮಾಣ ತಗ್ಗಿಸುವುದಕ್ಕಾಗಿ ಗ್ರಾಮಸ್ಥರೆಲ್ಲರೂ ಸೇರಿ `ಜೋಳಿಗೆ ಅಭಿಯಾನ’ ನಡೆಸಿದ್ದರು.
ಇದನ್ನೂ ಓದಿ: ನಿಧಾನವಾಗಿ ಬನ್ನಿ.. ಇದು ಬಿಸಗೋಡು ರಸ್ತೆ!
ಮೊದಲ ಹಂತವಾಗಿ 32850ರೂ ದೇಣಿಗೆ ದೊರೆತಿದ್ದು, 7 ತಾಸುಗಳ ಜೆಸಿಬಿ ಕೆಲಸ ಮಾಡಿಸಿ ತಾತ್ಕಾಲಿಕವಾಗಿ ರಸ್ತೆ ದುರಸ್ಥಿ ಮಾಡಿಕೊಂಡಿದ್ದರು. ಇದೀಗ ಮಳೆ ಮುಗಿದ ಹಿನ್ನಲೆ ಭಾನುವಾರ ಡಾಂಬರು ರಸ್ತೆಗೆ ಮಣ್ಣು ಸುರುವಿದ ಜನ ಅಲ್ಲಿ ಶ್ರಮದಾನ ಮಾಡಿದ್ದಾರೆ. ಈವರೆಗೆ 77 ಸಾವಿರ ರೂ ಹಣ ಜಮಾ ಆಗಿದ್ದು, ಆ ಹಣದಲ್ಲಿ ರಸ್ತೆಗೆ ಮಣ್ಣು ಹಾಕುವ ಕೆಲಸ ಶುರುವಾಗಿದೆ. ಭಾನುವಾರ 12 ಮಹಿಳೆಯರನ್ನು ಒಳಗೊಂಡು 30ಕ್ಕೂ ಅಧಿಕ ಜನ ಭಾಗವಹಿಸಿ ಶ್ರಮದಾನ ಮಾಡಿದ್ದಾರೆ.
ಇದನ್ನೂ ಓದಿ: ಜೋಳಿಗೆ ತುಂಬ ಜನರ ಅನುದಾನ
ಈ ದಿನ ನಡೆದ ಕೆಲಸಕ್ಕೆ ಗೃಹಲಕ್ಷ್ಮಿ ಹಣ ನೀಡಿದ್ದಲ್ಲದೇ, ಶ್ರಮದಾನಕ್ಕೆ ಬಂದವರಿಗೆ ಊಟೋಪಚಾರದ ವ್ಯವಸ್ಥೆಯನ್ನು ಸಹ ಮಹಾಲಕ್ಷ್ಮಿಯರು ವಹಿಸಿಕೊಂಡಿದ್ದರು. ಪ್ರಸ್ತುತ ಎರಡು ಟಿಪ್ಪರ್ ಹಾಗೂ ಎರಡು ಜೆಸಿಬಿ ಮೂಲಕ ರಸ್ತೆಗೆ ಮಣ್ಣು ಹಾಕಿ ಸಮದಟ್ಟು ಮಾಡುವ ಕೆಲಸ ನಡೆಯುತ್ತಿದ್ದು, ಕಾರ್ಮಿಕರಿಗೆ ಹಾಗೂ ಊರಿನವರಿಗೆ ಮಹಿಳಾ ಮಂಡಳದವರು ಮಧ್ಯಾಹ್ನದ ಸಿಹಿ ಊಟ ಬಡಿಸಿದರು.
ಇದನ್ನೂ ಓದಿ: ಹೊಗಳುಭಟ್ಟರಿಗೆ ಸಿಕ್ಕಿಲ್ಲ ಹೊಂಡ ಮುಚ್ಚುವ ಹಣ!
ಇನ್ನೂ ಸೋಮವಾರ ಸಹ ಊರಿನವರ ಶ್ರಮದಾನ ಮುಂದುವರೆಯಲಿದೆ. ಸೋಮವಾರ ಇನ್ನಷ್ಟು ಜನ ಆಗಮಿಸಿ ರಸ್ತೆ ದುರಸ್ಥಿ ಕಾರ್ಯಕ್ಕೆ ಕೈ ಜೋಡಿಸುವ ಭರವಸೆ ನೀಡಿದ್ದಾರೆ.



