ಯಲ್ಲಾಪುರ: ಪಟ್ಟಣದ ಸುತ್ತಲು ಗಾಂಜಾ ಮಾರಾಟ ಹಾಗೂ ಸೇವನೆಯಲ್ಲಿ ತೊಡಗಿದ್ದವರ ಮೇಲೆ ಭಾನುವಾರ ಪೊಲೀಸರು ದಾಳಿ ನಡೆಸಿದ್ದಾರೆ. ನಿಸರ್ಗಮನೆ ಕ್ರಾಸಿನ ಬಳಿ ಮುಬಾರಕ್ ರಾಜಸಾಬ್ ಸಿದ್ದಿ (28), ಮದನೂರಿನ ಆಲ್ಕೇರಿ ಕ್ರಾಸಿನ ಬಳಿ ಪುಂಡಲಿಕ ಪಾಟೀಲ (40) ಸಿಕ್ಕಿ ಬಿದ್ದಿದ್ದಾರೆ.
ಕೂಲಿ ಕೆಲಸ ಮಾಡುವ ಮುಬಾರಕ್ ರಾಜಸಾಬ್ ಸಿದ್ದಿ ಉದ್ಯಮನಗರದವ. ಗೌಂಡಿ ಕೆಲಸ ಮಾಡುವ ಪುಂಡಲಿಕ ರಾಮು ಪಾಟೀಲ ಮದನೂರಿನವ. ಪುಂಡಲಿಕ ಪಾಟೀಲ್ ಗಾಂಜಾ ಮಾರಾಟ ಮಾಡುವ ವೇಳೆ ಸಿಕ್ಕಿ ಬಿದ್ದಿದ್ದು, ಮುಬಾರಕ್ ಸಿದ್ದಿ ಗಾಂಜಾ ಸೇವಿಸುತ್ತಿರುವಾಗ ಸಿಕ್ಕಿ ಬಿದ್ದಿದ್ದಾನೆ.
ಮದನೂರಿನ ಅಲ್ಕೇರಿ ಕ್ರಾಸಿನ ಬಳಿ ನಿಂತಿದ್ದ ಪುಂಡಲಿಕ ಪಾಟೀಲ್ ಆ ಮಾರ್ಗವಾಗಿ ಸಂಚರಿಸುತ್ತಿದ್ದ ಜನರನ್ನು ನಿಲ್ಲಿಸಿ ಗಾಂಜಾ ವ್ಯವಹಾರ ನಡೆಸುತ್ತಿದ್ದ. ಪಿಎಸ್‌ಐ ಸಿದ್ದಪ್ಪ ಗುಡಿ ಅವರಿಗೆ ಈ ಬಗ್ಗೆ ವ್ಯಕ್ತಿಯೊಬ್ಬರು ಮಾಹಿತಿ ರವಾನಿಸಿದ್ದರು. ತಮ್ಮ ತಂಡದ ಜೊತೆ ಹೋದ ಅವರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ 5 ಸಾವಿರ ರೂ ಮೌಲ್ಯದ 343 ಗ್ರಾಂ ಗಾಂಜಾ ಸಿಕ್ಕಿದೆ.
ಪೊಲೀಸ್ ಸಿಬ್ಬಂದಿ ಮಹಮದ್ ಶಫಿ, ಸಂತೋಷ ರಾತೋಡ್, ಮಂಜಪ್ಪ ಪೂಜಾರ್, ಗಿರೀಶ ಲಮಾಣಿ, ಶೋಭಾ ನಾಯ್ಕ, ಶೇಷು ಮರಾಠಿ, ಶಿಲ್ಪಾ ಗೌಡ, ಮುತ್ತಪ್ಪ, ಮಹಾವೀರ, ಕರ್ಣಕುಮಾರ, ಗಂಗಾರಾಮ ಸೇರಿ ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ.
ಇನ್ನೂ ನಿಸರ್ಗಮನೆ ತಿರುವಿನಲ್ಲಿ ನಿಂತು ಗಾಂಜಾ ಸೇವನೆಯಲ್ಲಿದ್ದ ಮುಬಾರಕ್ ಸಿದ್ದಿಯನ್ನು ಪಿಎಸ್‌ಐ ಶೇಡಜಿ ಚೌಹಾಣ್ ವಿಚಾರಣೆಗೆ ಒಳಪಡಿಸಿದರು. ಆತ ಮಾತು ತೊದಲಿದ ಕಾರಣ ಅನುಮಾನಗೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಅಲ್ಲಿ ಆತ ಗಾಂಜಾ ಸೇದಿರುವುದು ದೃಢವಾದ ಹಿನ್ನಲೆ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.



