ಅಂಕೋಲಾ: ಪಂಚಾಯತ ನಿವೃತ್ತ ನೌಕರ ದೇವಾ ಗೌಡ ಅವರಿಗೆ ಎಟಿಎಂ ಕೇಂದ್ರದಲ್ಲಿ ಸಹಾಯ ಮಾಡುವ ನೆಪದಲ್ಲಿ ಅಪರಿಚಿತ ಎದುರಾಗಿದ್ದು, ಆತ ಅವರ ಖಾತೆಯಿಂದ 37 ಸಾವಿರ ರೂ ಹಣ ಎಗರಿಸಿದ್ದಾನೆ.
ಬೆಳಸೆ ತೆಂಕನಾಡದ ದೇವಾ ಲೋಕಪ್ಪ ಗೌಡ (61) ಅವರು ನ 8ರಂದು ಅಂಕೋಲಾ ಕೆ ಸಿ ರಸ್ತೆಯ ಎಸ್‌ಬಿಐ ಎಟಿಎಂ ಕೇಂದ್ರಕ್ಕೆ ತೆರಳಿದ್ದರು. ಅಲ್ಲಿದ್ದ ಸೆಕ್ಯುರಿಟಿ ಸಿಬ್ಬಂದಿ ನೆರವಿನಿಂದ 3 ಸಾವಿರ ರೂ ಹಣ ಹಿಂಪಡೆದಿದ್ದರು. ಆ ವೇಳೆ ಅಲ್ಲಿಗೆ ಬಂದ ಅಪರಿಚಿತನೊಬ್ಬ `ಹಣ ಪಡೆದ ನಂತರ ಸ್ಟೇಟ್‌ಮೆಂಟ್ ಪಡೆಯಬೇಕು’ ಎಂದು ಸಲಹೆ ನೀಡಿದ. ಸ್ಟೇಟ್‌ಮೆಂಟ್ ಪಡೆಯಲು ಆತನೇ ಸಹಾಯವನ್ನು ಮಾಡಿದ. ಈ ವೇಳೆ ಎಟಿಎಂ ಕೇಂದ್ರದಲ್ಲಿ ದೇವಾ ಗೌಡ ಅವರು ನಮೂದಿಸಿದ ಪಾಸ್‌ವರ್ಡ ನೋಡಿದ ಆತ, ಅವರ ಬಳಿಯಿದ್ದ ಎಟಿಎಂ ಕಾರ್ಡನ್ನು ಉಪಾಯವಾಗಿ ಬದಲಿಸಿದ್ದ.
ಮಧ್ಯಾಹ್ನ 2 ಗಂಟೆಗೆ ದೇವಾ ಗೌಡ ಅವರು ಮನೆಯಲ್ಲಿದ್ದಾಗ ಅವರ ಖಾತೆಯಿಂದ 37 ಸಾವಿರ ರೂ ಹಣ ಕಡಿತವಾದ ಬಗ್ಗೆ ಮೆಸೆಜ್ ಬಂದಿದೆ. ತಕ್ಷಣ ಅವರು ತಮ್ಮ ಅಳಿಯ ಉಮೇಶ ಗೌಡರ ಜೊತೆ ಬ್ಯಾಂಕಿಗೆ ಹೋಗಿ ವಿಚಾರಿಸಿದರು. ಆಗ, ಎಟಿಎಂ ಬಳಸಿ ಹಣ ಪಡೆದ ಬಗ್ಗೆ ಅಲ್ಲಿನ ಸಿಬ್ಬಂದಿ ಮಾಹಿತಿ ನೀಡಿದರು. ಕಿಸೆಯಲ್ಲಿದ್ದ ಎಟಿಎಂ ನೋಡಿದಾಗ ಅದು ಬೇರೆಯವರದ್ದಾಗಿತ್ತು!
ಅಪರಿಚಿತರಿಂದ ಮಾವನಿಗೆ ಆದ ಮೋಸದ ಬಗ್ಗೆ ವಾಸು ಗೌಡ ಪೊಲೀಸ್ ದೂರು ನೀಡಿದ್ದಾರೆ.