ಯಲ್ಲಾಪುರ: ಸಂಗೀತ-ಸಾಹಿತ್ಯ ಹಾಗೂ ವಿವಿಧ ಕಲಾ ಪ್ರದರ್ಶನಗಳ ಮೂಲಕ ರಾಜ್ಯ-ರಾಷ್ಟ್ರಮಟ್ಟದಲ್ಲಿ ಬಹುಮಾನ ಪಡೆದಿರುವ ಸಮೃದ್ಧಿ ಭಾಗ್ವತ ಅವರು `ಕಲಾಶ್ರೀ’ ಪ್ರಶಸ್ತಿ ಪಡೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಹಿಂದೂಸ್ತಾನಿ ಸಂಗೀತ ಸ್ಪರ್ಧೆಯಲ್ಲಿ ಸಮೃದ್ಧಿ ಭಾಗ್ವತ ಅವರು ಭಾಗವಹಿಸಿದ್ದರು. ತಮ್ಮ ಗಾಯನದ ಮೂಲಕ ನಿರ್ಣಾಯಕರ ಮನಗೆದ್ದ ಅವರು `ಕಲಾಶ್ರೀ’ ಪ್ರಶಸ್ತಿಗೆ ಭಾಜನರಾದರು. ಕಾರವಾರದ ಸ್ತ್ರೀಶಕ್ತಿ ಭವನದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಪ್ರಶಸ್ತಿ ನೀಡಿ ಮೆಚ್ಚುಗೆಯ ಮಾತನಾಡಿದರು.
ಸಮೃದ್ಧಿ ಭಾಗ್ವತ ಅವರು ಯಲ್ಲಾಪುರ ತಾಲೂಕಿನ ಬಿಸಗೋಡು ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾರೆ. ಬಾಲ್ಯದಿಂದಲೂ ಅವರು ಓದಿನ ಜೊತೆ ವಿವಿಧ ಬಗೆಯ ಸಾಂಸ್ಕೃತಿಕ ಪ್ರಕಾರಗಳಲ್ಲಿ ಭಾಗವಹಿಸುತ್ತ ಬಂದಿದ್ದಾರೆ. ಜಾನಪದ ಗೀತೆ, ದೇಶಭಕ್ತಿ ಗೀತೆ, ಅಭಿನಯ ಗೀತೆ, ಲಘು ಸಂಗೀತ, ಪ್ರಬಂಧ ಸ್ಪರ್ಧೆಗಳಲ್ಲಿ ಸಮೃದ್ಧಿ ಭಾಗ್ವತ ಅವರಿಗೆ ಅಪಾರ ಆಸಕ್ತಿ. ಕಥೆ ಹೇಳುವುದು, ಚಿತ್ರಕಲೆ ಅವರ ಪ್ರಮುಖ ಹವ್ಯಾಸ. ಅವರಲ್ಲಿನ ಆಸಕ್ತಿ ಹಾಗೂ ಹವ್ಯಾಸಗಳೇ ವಿವಿಧ ಬಹುಮಾನ ಹಾಗೂ ಪ್ರಶಸ್ತಿ ದೊರಕಿಸಿಕೊಡುವಲ್ಲಿ ಮುಖ್ಯ ಪಾತ್ರವಹಿಸಿವೆ.
ಸಮೃದ್ಧಿ ಭಾಗ್ವತ ಅವರ ತಂದೆ ಸಣ್ಣಪ್ಪ ಭಾಗ್ವತ, ತಾಯಿ ವೀಣಾ ಹೆಗಡೆ ಇಬ್ಬರು ಶಿಕ್ಷಕರು. ಮಕ್ಕಳ ಸಾಧನೆಗೆ ಅವರೇ ಮೊದಲ ಪ್ರೇರಣೆ. ಸಮೃದ್ಧಿ ಭಾಗ್ವತ ಅವರ ಸಂಗೀತ ತರಗತಿಗಳಿಗೆ ವಿ ದತ್ತಾತ್ರೇಯ ಚಿಟ್ಟೇಪಾಲ್ ಗುರು. ಸಮೃದ್ಧಿ ಅವರಿಗೆ ಖಾಸಗಿ ಶಾಲೆಗಳ ಮೇಲೆ ಮೋಹವಿಲ್ಲ. ಹೀಗಾಗಿ ಅವರು ಬಾಲ್ಯದಿಂದಲೂ ಸರ್ಕಾರಿ ಶಾಲೆ ಬಿಟ್ಟು ಬೇರೆ ಕಡೆ ಶಿಕ್ಷಣಕ್ಕೆ ಹೋಗಿಲ್ಲ.