ಸಿದ್ದಾಪುರ: ಶಿರಸಿ ಸಿದ್ದಾಪುರ ರಸ್ತೆಯ ನೀಡಗೋಡು – ಮಂಡ್ಲಿಕೊಪ್ಪ ಸೇತುವೆ ಬಳಿ ದಿಬ್ಬಕ್ಕೆ ಗುದ್ದಿದ ಕಾರು ನಂತರ ಅದೇ ಮಾರ್ಗವಾಗಿ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ.
ಕೊಡ್ಸೆ ಹೇಮಗಾರದ ಯೋಗೇಶ ಮಂಜುನಾಥ ಗೌಡ ಕಾರು ಚಲಾಯಿಸುತ್ತಿದ್ದರು. ಸಿದ್ದಾಪುರ ಕಡೆ ಬೈಕ್ ಓಡಿಸಿಕೊಂಡು ಬರುತ್ತಿದ್ದ ಕಡಗೇರಿ ಹಕ್ಕಲಕೇರಿಯ ಮಂಜುನಾಥ ನಾರಾಯಣ ನಾಯ್ಕರನ್ನು ಅವರು ಹಿಂದಿಕ್ಕಿ ಮುಂದೆ ಹೋಗಿದ್ದರು. ಆದರೆ, ರಸ್ತೆ ಎಡಬದಿ ದಿಬ್ಬಕ್ಕೆ ಯೋಗೇಶ ಗೌಡರು ಕಾರು ಡಿಕ್ಕಿ ಹೊಡೆದಿದ್ದು, ಅದಾದ ನಂತರ ಕಾರಿನ ನಿಯಂತ್ರಣ ತಪ್ಪಿ ಹಿಂದಿನಿoದ ಬರುತ್ತಿದ್ದ ಮಂಜುನಾಥ ನಾಯ್ಕರ ಬೈಕಿಗೆ ತಮ್ಮ ಕಾರು ಗುದ್ದಿದರು.
ಕಾರು ಬೈಕಿಗೆ ಗುದ್ದಿದ ರಭಸಕ್ಕೆ ಮಂಜುನಾಥ ನಾಯ್ಕರ ಸೊಂಟ, ಕೈ ಹಾಗೂ ಭುಜದ ಮೂಳೆ ಮುರಿದಿದೆ. ಬೈಕಿನಲ್ಲಿ ಹಿಂದೆ ಕೂತಿದ್ದ ಜಯಂತಿ ನಾಯ್ಕ ಅವರ ಮೈ-ಕೈಗೆ ಗಾಯವಾಗಿದೆ. ಇದರೊಂದಿಗೆ ಕಾರು ಚಲಾಯಿಸುತ್ತಿದ್ದ ಯೋಗೇಶ ಗೌಡ ಸಹ ಗಾಯಗೊಂಡಿದ್ದಾರೆ. ಈ ಎಲ್ಲರೂ ಆಸ್ಪತ್ರೆ ಸೇರಿದ್ದು, ಪೊಲೀಸರು ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.




