ಭಟ್ಕಳ: ಮೂರು ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟು 2 ಲಕ್ಷ ರೂ ಸ್ವೀಕರಿಸಿದ್ದ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ ಶುಕ್ರವಾರ 50 ಸಾವಿರ ರೂ ಹಣ ಪಡೆಯುವ ವೇಳೆ ಸಿಕ್ಕಿ ಬಿದ್ದಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ನೀಲಕಂಠ ಮೇಸ್ತಾ ಅವರ ಮೇಲೆ ದಾಳಿ ನಡೆಸಿ ಲಂಚದ ಹಣವನ್ನು ವಶಕ್ಕೆ ಪಡೆದರು. ಜೊತೆಗೆ ಅವರನ್ನು ಸಹ ಬಂಧಿಸಿ ಜೈಲಿಗೆ ಕಳುಹಿಸಿದರು.
ಮೊಹ್ಮದ ಇದ್ರಿಸ್ ಮೋಹತೇಷಾಮ್ ಎಂಬಾತರಿAದ ನೀಲಕಂಠ ಮೇಸ್ತಾ 3 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಒಳಚರಂಡಿ ಜೋಡಣೆ ಕಾಮಗಾರಿ ನಡೆಸುವುದಕ್ಕಾಗಿ 2 ಲಕ್ಷ ರೂ ಮುಂಗಡ ಹಣವನ್ನು ಪಡೆದಿದ್ದರು. ಈ ಹಿನ್ನಲೆ ಮಹ್ಮದ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಶುಕ್ರವಾರ ಕಾರವಾರ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಹಾಗೂ ಪ್ರಭಾರಿ ಲೋಕಾಯುಕ್ತ ಡಿವೈಎಸ್ಪಿ ವಿನಾಯಕ ಬಿಲ್ಲವ ನೇತೃತ್ವದಲ್ಲಿ ದಾಳಿ ನಡೆಯಿತು.
ಲಂಚ ನೀಡಿದರೂ ಕೆಲಸ ಆಗಲ್ಲ!
ದೂರುದಾರರು 2003ರಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ಪಡೆದಿದ್ದರು. ಆದರೆ, ಅವರಿಗೆ ನಮೂನೆ -3 ಸಿಕ್ಕಿರಲಿಲ್ಲ. ಒಳ ಚರಂಡಿ ವ್ಯವಸ್ಥೆಯೂ ಆಗಿರಲಿಲ್ಲ. ಆರೋಪಿ ಅಧಿಕಾರಿ ನಮೂನೆ 3 ವಿತರಿಸಲು 2 ಲಕ್ಷ ರೂ ಹಣ ಪಡೆದು 93 ಸಾವಿರಕ್ಕೆ ರಸೀದಿ ನೀಡಿದ್ದರು. ಅದಾಗಿಯೂ ಕೆಲಸ ಮಾಡಿಕೊಡಲು ಮತ್ತೆ 1 ಲಕ್ಷ ರೂ ಬೇಡಿಕೆ ಇಟ್ಟಿದ್ದರು.
ಲಂಚ ಕೊಟ್ಟರೂ ಕೆಲಸ ಆಗದ ಕಾರಣ ಹಾಗೂ ಮತ್ತೆ ಲಂಚ ಬೇಡಿದ ಕಾರಣ ದೂರುದಾರರು ಲೋಕಾಯುಕ್ತರ ಮೊರೆ ಹೋಗಿದ್ದರು. ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ನೀಲಕಂಠ ಮೇಸ್ತಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. 20ಕ್ಕೂ ಅಧಿಕ ಲೊಕಾಯುಕ್ತ ಪೊಲೀಸ್ ಸಿಬ್ಬಂದಿ ಈ ದಾಳಿಯಲ್ಲಿದ್ದರು.
ಲೋಕಾಯುಕ್ತ ದಾಳಿ ಹೇಗಾಯ್ತು? ದಾಳಿ ನಂತರ ಅಧಿಕಾರಿಗಳು ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..