ಯಲ್ಲಾಪುರ: ಸಂಕಲ್ಪ ಮುಂದಿನ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಶುಕ್ರವಾರ ಸಂಜೆ ಲಾರಿಯೊಂದು ನಿಂತಿದ್ದು, ಅದರೊಳಗೆ ಚಾಲಕ ಸಾವನಪ್ಪಿರುವುದು ಪತ್ತೆಯಾಗಿದೆ. ಚಾಲು ಸ್ಥಿತಿಯಲ್ಲಿದ್ದ ಲಾರಿಯ ಚಾವಿ ತಿರುಗಿಸಿ ಪೊಲೀಸರೇ ಅಪಾಯ ತಪ್ಪಿಸಿದ್ದಾರೆ.
ತಮಿಳುನಾಡು ಮೂಲದ ಲಾರಿಯನ್ನು ಅಣ್ಣಾದೊರೈ ಎಂಬಾತ ಓಡಿಸಿಕೊಂಡು ಬಂದಿದ್ದ. ಆತ ಲಾರಿಯನ್ನು ಹೆದ್ದಾರಿಯಲ್ಲಿ ನಿಲ್ಲಿಸಿ ಹಿಂದಿನ ಆಸನದಲ್ಲಿ ಮಲಗಿದ್ದ. ಆದರೆ, ಲಾರಿಯನ್ನು ಬಂದ್ ಮಾಡಿರಲಿಲ್ಲ. ಸಂಚಾರ ದಟ್ಟಣೆ ಹೆಚ್ಚಾದ ಕಾರಣ ಲಾರಿಯನ್ನು ಮುಂದೆ ಕಳುಹಿಸಲು ಪೊಲೀಸರು ಪ್ರಯತ್ನಿಸಿದರು. ಆದರೆ, ಎಷ್ಟು ಎಬ್ಬಿಸಿದರೂ ಚಾಲಕ ಮಲಗಿದ ಸ್ಥಳದಿಂದ ಮೇಲೆ ಏಳಲಿಲ್ಲ.
ನಂತರ ಪಿಎಸ್‌ಐ ಸಿದ್ದಪ್ಪ ಗುಡಿ ಲಾರಿ ಚಾವಿ ತಿರುಗಿಸಿ ಚಾಲು ಸ್ಥಿತಿಯಲ್ಲಿದ್ದ ವಾಹನವನ್ನು ಬಂದ್ ಮಾಡಿದರು. ಲಾರಿ ಮೇಲೆ ಹತ್ತಿ ಆತನನ್ನು ಎಬ್ಬಿಸುವ ಪ್ರಯತ್ನ ನಡೆಸಿದಾಗ ಉಸಿರಾಟ ನಿಂತಿರುವುದು ಗಮನಕ್ಕೆ ಬಂದಿತು. ವೈದ್ಯರು ಸಹ ಚಾಲಕ ಅಣ್ಣಾದೊರೈ ಸಾವನಪ್ಪಿರುವುದನ್ನು ಖಚಿತಪಡಿಸಿದರು.
ಅಣ್ಣಾದೊರೈ ಹೃದಯಘಾತದಿಂದ ಸಾವನಪ್ಪಿರುವ ಶಂಕೆ ವ್ಯಕ್ತವಾಗಿದೆ.




