ಯಲ್ಲಾಪುರ: ತಾಲೂಕಿನ ಸವಣಗೇರಿ ಶಾಲೆಗೆ ದಾನಿಗಳ ನೆರವಿನಿಂದ ಇಂಟರ್‌ನೆಟ್ ಸೇವೆ ಒದಗಿಸಲಾಗಿದೆ. ನಾನಾ ಭಾಗದ ಸಂಪನ್ಮೂಲ ವ್ಯಕ್ತಿಗಳು ಆನ್‌ಲೈನ್ ಮೂಲಕ ಮಕ್ಕಳಿಗೆ ಪಾಠ ಮಾಡಲು ಈ ವ್ಯವಸ್ಥೆ ಸಹಕಾರಿಯಾಗಲಿದೆ.
`ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳಸುವಿಕೆ, ಗಣಿತದ ಪ್ರಾತ್ಯಕ್ಷಿಕೆ, ವಿಜ್ಞಾನ ಪಾಠ ಹಾಗೂ ಮಾದರಿಗಳ ಬಗ್ಗೆ ಸ್ಪಷ್ಠತೆ ಮೂಡಿಸಲು ತಂತ್ರಜ್ಞಾನ ಸಹಕಾರಿಯಾಗಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ಅಭಿಪ್ರಾಯಪಟ್ಟರು.
`ಪಠ್ಯಕ್ರಮದ ಜೊತೆ ಹಾಡು, ನೃತ್ಯ ಮೊದಲಾದ ವಿಷಯಗಳ ಬಗ್ಗೆಯೂ ಇಂಟರ್‌ನೆಟ್ ನೆರವಿನಿಂದ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಭಾಷಾ ಉಚ್ಚಾರ, ಆನ್‌ಲೈನ್ ಮೂಲಕ ಶಿಕ್ಷಣ ನೀಡುವಿಕೆಗೂ ಇದು ಸಹಕಾರಿ’ ಎಂದು ಅವರು ವಿವರಿಸಿದರು. ಗ್ರಾಮದ ವೆಂಕಟ್ರಮಣ ಎಂ ಹೆಗಡೆ ಅವರು ಶಾಲೆಗೆ ಇಂಟರ್‌ನೆಟ್ ಸಂಪರ್ಕ ಒದಗಿಸಿಕೊಟ್ಟಿದ್ದಾರೆ. ಸವಣಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶ್ರೀಪಾದ ಹೆಗಡೆ ಹಾಗೂ ಆಡಳಿತ ಮಂಡಳಿಯವರು ಪ್ರತಿ ತಿಂಗಳ ವೆಚ್ಚವನ್ನು ಭರಿಸುವ ಭರವಸೆ ನೀಡಿದ್ದಾರೆ.
ತಾಲೂಕಿನ ಕೆಲವೇ ಕೆಲವು ಪ್ರಾಥಮಿಕ ಶಾಲೆಯಲ್ಲಿ ಇಂಟರ್‌ನೆಟ್ ಸೇವೆಯಿದೆ.