ಯಲ್ಲಾಪುರ: ಕಳೆದ ಮೂರು ತಿಂಗಳ ಹಿಂದೆ ಪುಟ್ಟ ಗುಡಿ ಸುತ್ತಲು ಗುಡ್ಡ-ಮಣ್ಣು ಹಾಗೂ ನೀರಿನಿಂದ ಕೂಡಿದ್ದ ನಾಯ್ಕನಕೆರೆ ಪ್ರದೇಶದಲ್ಲಿ ಇದೀಗ ಸುಂದರ ದತ್ತ ಮಂದಿರ ತಲೆ ಎತ್ತಿದೆ. ಹಗಲು-ರಾತ್ರಿ ಶಿಲ್ಪಿಗಳು ಶ್ರಮಿಸಿದ ಕಾರಣ ಅಲ್ಪ ದಿನಗಳಲ್ಲಿ ಅಪಾರ ವಿಸ್ತೀರ್ಣದ ದೇಗುಲ ನಿರ್ಮಾಣವಾಗಿದೆ. ಮೂರು ತಿಂಗಳ ಅವಧಿಯಲ್ಲಿ ನಿರ್ಮಾಣವಾದ ಮೂರು ಕೋಟಿ ರೂ ಕ್ರಿಯಾ ಯೋಜನೆಯ ದತ್ತ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಲಿದೆ. ಪ್ರಸ್ತುತ ಒಂದು ಕೋಟಿ ರೂ ವೆಚ್ಚದಲ್ಲಿ ಗರ್ಭಗುಡಿ ಹಾಗೂ ಇನ್ನಿತರ ಕಾಮಗಾರಿ ಮುಕ್ತಾಯವಾಗಿದೆ. ಇನ್ನು 2 ಕೋಟಿ ರೂ ವೆಚ್ಚದ ಕಾಮಗಾರಿ ಬರುವ ವರ್ಷದಿಂದ ಶುರುವಾಗಲಿದೆ.
`ಪಟ್ಟಣದ ನಾಯಕನಕೆರೆಯ ಬಳಿ ನೂತನವಾಗಿ ನಿರ್ಮಾಣಗೊಂಡ ಶಿಲಾಮಯ ದತ್ತಮಂದಿರ ಡಿಸೆಂಬರ್ 13, 14 ಹಾಗೂ 15ರಂದು ಲೋಕಾರ್ಪಣೆಗೊಳ್ಳಲಿದೆ’ ಎಂದು ದೇವಾಲಯ ಪ್ರಚಾರ ಸಮಿತಿಯ ಶ್ರೀರಂಗ ಕಟ್ಟಿ ಸುದ್ದಿಗಾರರಿಗೆ ತಿಳಿಸಿದರು.

ಶನಿವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾಹಿತಿ ನೀಡಿದ ಅವರು `ಡಿ 13 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾನ 3ಗಂಟೆಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಪುರಪ್ರವೇಶ, ಪೂರ್ಣಕುಂಭ ಸ್ವಾಗತ, ಸಂಜೆ ಧಾರ್ಮಿಕ ಕಾರ್ಯಕ್ರಮ ಹಾಗೂ ಅನಂತ ಪದ್ಮನಾಭ ಭಟ್ಟ ಕಾರ್ಕಳ ಅವರಿಂದ ಕೀರ್ತನೆ, ಗಣಪತಿ ಭಾಗ್ವತ್ ಮೊಟ್ಟೆಗದ್ದೆ ಸಂಗಡಿಗರಿoದ ಗಾನ ವೈಭವ ನಡೆಯಲಿದೆ’ ಎಂದು ವಿವರಿಸಿದರು.
ಇದನ್ನೂ ಓದಿ: ದತ್ತ ಮಂದಿರದ ವಿಶೇಷತೆಗಳೇನು?
`ಡಿ 14ರಂದು ಶ್ರೀಗಳಿಂದ ದೇವರಪುನರ್ ಪ್ರತಿಷ್ಠೆ, ಶಿಖರ ಪ್ರತಿಷ್ಠೆ ನಡೆಯಲಿದೆ. ಮಧ್ಯಾನ ಶ್ರೀಗಳ ಸಾನಿಧ್ಯದಲ್ಲಿ ಧರ್ಮಸಭೆ, ನಂತರ ವಾಣಿ ರಮೇಶ ಅವರಿಂದ ಭಕ್ತಿ ಸಂಗೀತ, ಕೊಂಡದಕುಳಿ ತಂಡದಿoದ ಯಕ್ಷಗಾನ, ಡಿ 15ಕ್ಕೆ ವಿವಿಧ ಧಾರ್ಮಿಕ ನಡೆಯಲಿದೆ. ಕೆ ಸಿ ನಾಗೇಶ ಅವರಿಂದ ದೇಹೋ ದೇವಾಲಯ ಪ್ರೋಕ್ತ, ಉಪನ್ಯಾಸ, ಗೌರಿ ಕುಲಕರ್ಣಿ ತಂಡದಿoದ ಭಕ್ತಿ ವೈಭವ, ಜಿಡಿ ಭಟ್ಟ ಕೆಕ್ಕಾರ ನಿರ್ದೇಶನದ ವರದಯೋಗಿ ಶ್ರೀಧರ ನಾಟಕ ಪ್ರದರ್ಶನಗೊಳ್ಳಲಿದೆ’ ಎಂದರು.
ಇದನ್ನೂ ಓದಿ: ದತ್ತ ಮಂದಿರ ಎಂಬ ದಿವ್ಯ ದೇಗುಲ
ಪ್ರಮುಖರಾದ ಪ್ರಶಾಂತ ಹೆಗಡೆ, ನಾಗೇಶ ಯಲ್ಲಾಪುರಕರ್, ನಾಗರಾಜ ಮದ್ಗುಣಿ, ವೇಣುಗೋಪಾಲ ಮದ್ಗುಣಿ, ಸಿ ಜಿ ಹೆಗಡೆ, ಮಹೇಶ ಗೌಳಿ, ಶಾಂತಾರಾಮ ಹೆಗಡೆ, ನಾರಾಯಣ ನಾಯಕ, ನರಸಿಂಹ ಗಾಂವ್ಕಾರ, ಶಿವಲಿಂಗಯ್ಯ ಅಲ್ಕಯ್ಯನಮಠ ಇದ್ದರು.