ಭಟ್ಕಳ: ಮುರುಡೇಶ್ವರ ದೇವಾಲಯ ಬಳಿಯ ಸಾಲುಮರದ ತಿಮ್ಮಕ್ಕ ಉದ್ಯಾನವನ ಹಾಳು ಬಿದ್ದಿದೆ. ಅದಾಗಿಯೂ ಉದ್ಯಾನವನ ಪ್ರವೇಶಕ್ಕೆ ಅರಣ್ಯ ಇಲಾಖೆ 20ರೂ ಹಣ ಪಡೆಯುತ್ತಿದೆ!
ಪ್ರವೇಶದ್ವಾರದಲ್ಲಿಯೇ ಕೂರುವ ಗುತ್ತಿಗೆ ಸಿಬ್ಬಂದಿ ಪಡೆದ ಕಾಸಿಗೆ ರಸೀದಿ ನೀಡುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ `ಮಿಶನ್ ಹಾಳಾಗಿದೆ’ ಎಂಬ ಉತ್ತರ ಸಿಗುತ್ತದೆ. ಉದ್ಯಾನವನ ಪ್ರವೇಶದ ಬಳಿ ಸಿಗುವ ಮಂಗನ ಬಾಲ ತುಂಡಾಗಿದೆ. ಸಿಸಿ ಕ್ಯಾಮರಾ ಹಾಳಾಗಿ ವರ್ಷ ಕಳೆದಿದೆ. ಜನ ಕೂರುವ ಆಸನಗಳ ಸುತ್ತಲು ಜೀಡು ಬೆಳೆದಿದೆ. ಆದರೆ, ಅದ್ಯಾವುದನ್ನು ಸರಿಪಡಿಸಲು ಅರಣ್ಯ ಅಧಿಕಾರಿಗಳಿಗೆ ಪುರಸೋತಾಗಿಲ್ಲ.
ಹೊನ್ನಾವರದ ಮಂಕಿ ಅರಣ್ಯ ವಲಯದ ವ್ಯಾಪ್ತಿಗೆ ಬರುತ್ತದೆ. ಇನ್ನೂ ಗಿಡಗಳ ಬಗ್ಗೆ ಬರೆಯಲಾದ ಮಾಹಿತಿ ಫಲಕವೂ ಹಾಳಾಗಿದೆ. ಶೌಚಾಲಯದ ಒಳಗೆ ನೀರಿಲ್ಲ. ಅಲ್ಲಿನ ಕಲಾಕೃತಿಗಳೆಲ್ಲವೂ ಉದುರಿಬಿದ್ದಿದೆ. 7 ಎಕರೆ ಪ್ರದೇಶದಲ್ಲಿರುವ ಉದ್ಯಾನವನ ನಿರ್ವಹಣೆಗೆ ಅಗತ್ಯ ಸಿಬ್ಬಂದಿ ಇಲ್ಲ. ಅವ್ಯವಸ್ಥೆಗಳ ಬಗ್ಗೆ ಪ್ರಶ್ನಿಸಿದರೂ ಉತ್ತರಿಸುವವರಿಲ್ಲ.
ಶನಿವಾರ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಹಾಗೂ ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಅರಣ್ಯ ಉದ್ಯಾನವನಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಪ್ರಶ್ನಿಸಿದರು. ಅಲ್ಲಿಂದಲೇ ವಿವಿಧ ಅಧಿಕಾರಿಗಳಿಗೆ ಫೋನ್ ಮಾಡಿದರು. ಆದರೆ, ಅವ್ಯವಸ್ಥೆಯನ್ನು ಸರಿಪಡಿಸುವ ಭರವಸೆ ಯಾರಿಂದಲೂ ಸಿಕ್ಕಿಲ್ಲ.