ಕುಮಟಾ: ಗೋಕರ್ಣದ ಪತಂಗ ರೆಸಾರ್ಟ ಹಿಂದಿನ ಸಮುದ್ರ ದಡೆಯ ಮೇಲೆ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ದುಬ್ಬನಶಸಿ ಹಾಗೂ ಭಾವಿಕೊಡ್ಲ ಕಡಲತೀರದ ನಡುವೆ ರೆಸಾರ್ಟ ಇದ್ದು, ಅದರ ಹಿಂದಿನ ಪ್ರದೇಶದ ಖಾಲಿ ಜಾಗದಲ್ಲಿ ಕೋಳಿ ಅಂಕ ಆಡಿಸಲಾಗುತ್ತದೆ. ಭಾನುವಾರ ರಾತ್ರಿ ಕೋಳಿ ಅಂಕ ನಡೆಯುವ ವೇಳೆ ದಾಳಿ ನಡೆಸಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಈ ವೇಳೆ ಅಲ್ಲಿದ್ದ ಕೋಳಿಗಳನ್ನು ಸಹ ವಶಕ್ಕೆ ಪಡೆದಿದ್ದಾರೆ.
ಪಿ.ಐ. ವಸಂತ್ ಆಚಾರ್ ಸಮುದ್ರ ವಿಹಾರಕ್ಕೆ ಹೋದಾಗ ಕೋಳಿ ಅಂಕದ ಬಗ್ಗೆ ಮಾಹಿತಿ ಪಡೆದಿದ್ದರು. ನಂತರ ಪಿಎಸ್‌ಐ ಖಾದರ್ ಬಾಷಾ ಅವರ ಜೊತೆ ತಂಡ ರಚಿಸಿಕೊಂಡು ದಾಳಿ ಮಾಡಿದರು. ಹೊನ್ನಾವರ ಕವಲಕ್ಕಿ ಕೋಳಿಗದ್ದೆಯ ವಿನಾಯಕ ರಾಮಾ ನಾಯ್ಕ (38), ಕುಮಟಾ ಶಶಿಹಿತ್ತಲನ ಈಶ್ವರ ಸುಬ್ರಾಯ ಭಂಡಾರಿ (45), ಅಂಕೋಲಾ ಕೇಣಿಯ ಪ್ರಮೋದ ಗಣಪತಿ ಬಂಟ (52), ಅಂಕೋಲಾ ಹೊನ್ನೆಕೇರಿಯ ಸಂಜಯ ರಾಕು ನಾಯ್ಕ(30), ಗೌರೀಶ ಸುರೇಶ ನಾಯ್ಕ (30) ಅವರ ಹೆಡೆಮುರಿ ಕಟ್ಟಿದರು.
ಈ ದಾಳಿಯಲ್ಲಿ ಪೊಲೀಸರಿಗೆ 9940ರೂ ಹಣ ಸಿಕ್ಕಿದೆ. ಎಂಟು ಬೈಕ್, ಕತ್ತಿ ಜೊತೆ ಎರಡು ಹುಂಜವನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.




