ಕಾರವಾರ: ಭಾರತೀಯ ನೌಕಾನೆಲೆಗೆ ವಿವಿಧ ಸಾಮಗ್ರಿ ಪೂರೈಕೆ ಮಾಡುತ್ತಿದ್ದ ಬಾಲಾಜಿ ಟ್ರೇಡಿಂಗ್ ಕಂಪನಿ ಮಾಲಕರ ಮೇಲೆ ಹಲ್ಲೆ ನಡೆದಿದೆ. ಕಂಪನಿ ಪಾಲುದಾರರಿಗೆ ದುಷ್ಕರ್ಮಿಗಳು `ಕಾರವಾರಕ್ಕೆ ಬಂದರೆ ಕೊಲೆ ಮಾಡುವೆ’ ಎಂದು ಬೆದರಿಕೆಯನ್ನು ಒಡ್ಡಿದ್ದಾರೆ!
ಮುಂಬೈಯ ಹರಿಕೇಶ ಯಾದವ್ ವಿವಿಧ ಕಡೆ ಬಾಲಾಜಿ ಟ್ರೆಡಿಂಗ್ ಕಂಪನಿ ನಡೆಸುತ್ತಿದ್ದಾರೆ. ಆರು ತಿಂಗಳ ಹಿಂದೆ ಅವರು ತಮ್ಮ ಸ್ನೇಹಿತ ಪ್ರಪ್ಪುಲ್ ಜಸಮ್ ಜೊತೆ ಸೇರಿ ಕಾರವಾರದಲ್ಲಿಯೂ ಮಳಿಗೆ ಶುರು ಮಾಡಿದ್ದರು. ಅರ್ಗಾ ನೇವಲ್ ಬೇಸ್ ಬಳಿ ಮಳಿಗೆ ಸ್ಥಾಪಿಸಿ ಭಾರತೀಯ ನೌಕಾನೆಲೆಗೆ ಅವರು ವಿವಿಧ ಸಾಮಗ್ರಿ ಪೂರೈಸುತ್ತಿದ್ದರು.
ಬಾಲಾಜಿ ಟ್ರೆಡಿಂಗ್ ಬಂದ ಪರಿಣಾಮ ಈ ಮೊದಲು ನೌಕಾನೆಲೆಗೆ ಸಾಮಗ್ರಿ ಪೂರೈಸುತ್ತಿದ್ದ ದುರ್ಗಾ ಎಂಟರ್ಪ್ರೈಸ್ ವ್ಯವಹಾರ ಕಡಿಮೆ ಆಗಿತ್ತು. ಹೀಗಾಗಿ ದುರ್ಗಾ ಮಳಿಗೆಯ ಹೇಮಂತ ರಾತೋಡ್ ಬಾಲಾಜಿ ಕಂಪನಿ ವಿರುದ್ಧ ಸಿಟ್ಟಾಗಿದ್ದರು.ನ 24ರ ಸಂಜೆ ಹರಿಕೇಶ ಯಾದವ್ ಹಾಗೂ ಪ್ರಪ್ಪುಲ್ ಜಸಮ್ ಮುಂಬೈಯಿ0ದ ಕಾರವಾರಕ್ಕೆ ಬಂದಿದ್ದು, ಅವರು ತಮ್ಮ ಮಳಿಗೆ ಬಳಿ ತೆರಳಿದ್ದರು.
ಆಗ ಅವರನ್ನು ಅಡ್ಡಗಡ್ಡಿದ ಹೇಮಂತ ರಾತೋಡ್, ತಮ್ಮ ಸಹಚರರಾದ ದಶರಥ, ಪ್ರವೀಣ ಹಾಗೂ ಇನ್ನಿಬ್ಬರ ಜೊತೆ ಸೇರಿ ದಾಳಿ ಮಾಡಿದರು. `ನೀವು ಬಂದ ಮೇಲೆ ನನ್ನ ವ್ಯಾಪಾರ ಹಾಳಾಗಿದೆ’ ಎಂದು ಅವರಿಬ್ಬರನ್ನು ಬೈದರು. ಜೊತೆಗೆ ಕಬ್ಬಿಣದ ರಾಡಿನಿಂದ ಹೊಡೆದರು. ಹೇಮಂತ್ ರಾತೋಡ್ ಜೊತೆಗಿದ್ದ ಇಬ್ಬರು ಬೈಕಿನ ಹೆಲ್ಮೇಟ್’ನಿಂದ ಥಳಿಸಿದರು. ನಂತರ ಎಲ್ಲರೂ ಸೇರಿ `ಮತ್ತೆ ಕಾರವಾರಕ್ಕೆ ಬಂದರೆ ಕೊಲೆ ಮಾಡುವೆ’ ಎಂದು ಹರಿಕೇಶ ಯಾದವ್ ಹಾಗೂ ಪ್ರಪ್ಪುಲ್ ಜಸಮ್’ಗೆ ಬೆದರಿಸಿದರು.
ಈ ಹೊಡೆದಾಟದಿಂದ ನೊಂದ ಮುಂಬೈ ನಿವಾಸಿಗಳಿಬ್ಬರು ಆಸ್ಪತ್ರೆ ಸೇರಿದ್ದು, ರಕ್ಷಣೆ ಕೋರಿ ಪೊಲೀಸ್ ದೂರು ನೀಡಿದ್ದಾರೆ.




