ಕಾರವಾರ: ಹಬ್ಬುವಾಡ ರಸ್ತೆಯ ಹೊಂಡ ಮುಚ್ಚುವಂತೆ ಸಾಕಷ್ಟು ಹೋರಾಡಿದರೂ ಅಧಿಕಾರಿಗಳು ಹೊಂಡ ಮುಚ್ಚಲು ಆಸಕ್ತಿವಹಿಸದ ಕಾರಣ ಗುರುವಾರ ರಿಕ್ಷಾ ಚಾಲಕರು ದಿಡೀರ್ ಪ್ರತಿಭಟನೆ ನಡೆಸಿದರು.
ಶಿರವಾಡದಿಂದ ಆಟೋ ಮೆರವಣಿಗೆ ನಡೆಸಿದ ರಿಕ್ಷಾ ಚಾಲಕರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಆಕ್ರೋಶವ್ಯಕ್ತಪಡಿಸಿದರು. ಹಬ್ಬುವಾಡ ರಸ್ತೆಯಿಂದ ರೈಲ್ವೆ ನಿಲ್ದಾಣದವರೆಗೂ ರಸ್ತೆ ಸಂಪೂರ್ಣ ಹದಗೆಟ್ಟಿರುವ ಬಗ್ಗೆ ಕಿಡಿಕಾರಿದರು. ರಸ್ತೆ ಹೊಂಡದ ಕಾರಣ ಬೈಕು ಹಾಗೂ ರಿಕ್ಷಾ ಸವಾರರು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ವಿವರಿಸಿದರು.
`ಈ ರಸ್ತೆಯು ರೈಲ್ವೆ ನಿಲ್ದಾಣ, ಶಾಲೆಗಳು ಹಾಗೂ ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಹೊಗುವ ಜನನಿಬಿಡ ರಸ್ತೆಯಾಗಿದೆ. ರಸ್ತೆಯನ್ನು ಆದಷ್ಟು ಶೀಘ್ರವೇ ಡಾಂಬರೀಕರಣ ಮಾಡಬೇಕು’ ಎಂದು ಆಗ್ರಹಿಸಿದರು. `ರಸ್ತೆ ಹಾಳಾಗಿದ್ದರಿಂದ ನಿತ್ಯದ ದುಡಿಮೆ ವಾಹನ ರಿಪೇರಿಗೆ ಖರ್ಚಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
`ಎಂಟು ದಿನದೊಳಗಾಗಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಕಾರವಾರ ಹಬ್ಬುವಾಡ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಸಿದರು.