ಹಳಿಯಾಳ: ಸಂಚಾರ ನಿಯಮ ಉಲ್ಲಂಘನೆ, ಮಕ್ಕಳ ಕೈಲಿ ವಾಹನ ನೀಡುವಿಕೆ ತಡೆಗೆ ಹಳಿಯಾಳ ಪೊಲೀಸರು ನಾಗರಿಕರಿಗೆ ಮಹತ್ವದ ಜವಾಬ್ದಾರಿವಹಿಸಿದ್ದಾರೆ!
ಈಚೆಗೆ ಅಪ್ರಾಪ್ತರಿಗೆ ವಾಹನ ಚಲಾಯಿಸಲು ನೀಡಿದ ಪಾಲಕರಿಗೆ ನ್ಯಾಯಾಲಯ 25 ಸಾವಿರ ರೂ ದಂಡ ವಿಧಿಸಿದೆ. ಪೊಲೀಸರು ಸಹ `ಅಪ್ರಾಪ್ತರಿಗೆ ವಾಹನ ನೀಡಬೇಡಿ’ ಎಂದು ಜನ ಜಾಗೃತಿ ಮೂಡಿಸುತ್ತಿದ್ದಾರೆ. ಅದಾಗಿಯೂ ಅಪ್ರಾಪ್ತರ ವಾಹನ ಚಾಲನೆಯಿಂದಾಗುವ ಸಮಸ್ಯೆ ಬಗ್ಗೆ ಪಾಲಕರಿಗೆ ಅರಿವಾಗುತ್ತಿಲ್ಲ. ಪಾಲಕರಿಗೆ ಗೊತ್ತಿಲ್ಲದೇ ವಾಹನ ಚಲಾಯಿಸುವ ಮಕ್ಕಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ಅಪ್ರಾಪ್ತರು ವಾಹನ ಚಲಾಯಿಸುತ್ತಿರುವ ಪ್ರಕರಣ ಹೆಚ್ಚಿದ ಹಿನ್ನಲೆ ಅಪರಾಧ ತಡೆಗೆ ಪೊಲೀಸರು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ವಿವಿಧ ಕಡೆ ತಪಾಸಣೆ ನಡೆಸುವುದು, ಪಾಲಕರ ಮನವೊಲೈಕೆಯ ಪ್ರಯತ್ನ ಮುಂದುವರೆದಿದೆ. ಅದಾಗಿಯೂ ಸಂಚಾರ ನಿಯಮ ಉಲ್ಲಂಘನೆ ಪ್ರಮಾಣ ಕಡಿಮೆ ಆಗಿಲ್ಲ. ಈ ಹಿನ್ನಲೆ ಸಾರ್ವಜನಿಕರ ಸಹಕಾರ ಕೋರಿರುವ ಪೊಲೀಸರು `ಸಂಚಾರ ನಿಯಮ ಉಲ್ಲಂಘಿಸಿದವರ ಫೋಟೋ ತೆಗೆದು ರವಾನಿಸಿ’ ಎಂದು ಕರೆ ನೀಡಿದ್ದಾರೆ.
ಹಳಿಯಾಳ ತಾಲೂಕಿನಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಭಿಯಾನ ನಡೆಯುತ್ತಿದೆ. ಸಣ್ಣಪುಟ್ಟ ಪ್ರಮಾಣದಲ್ಲಿ ಕಾನೂನು ಉಲ್ಲಂಘಿಸಿದವರಿಗೆ ಮೊದಲ ಬಾರಿ ಎಚ್ಚರಿಕೆ ನೀಡುತ್ತಿರುವ ಪೊಲೀಸರು ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ.
ಈ ಹಿನ್ನಲೆ ಅಪ್ರಾಪ್ತರು ವಾಹನ ಚಲಾಯಿಸುತ್ತಿರುವುದು ಕಾಣಿಸಿದರೆ ಆ ವಾಹನ ನೋಂದಣಿ ಸಂಖ್ಯೆಯ ಜೊತೆ ಫೋಟೋ ಕಳುಹಿಸುವಂತೆ ಅಲ್ಲಿನ ಪೊಲೀಸರು ಕರೆ ನೀಡಿದ್ದಾರೆ. ಇದರೊಂದಿಗೆ ಎಲ್ಲಾ ಬಗೆಯ ಸಂಚಾರ ನಿಯಮ ಉಲ್ಲಂಘನೆ ಫೋಟೋಗಳನ್ನು ವಾಟ್ಸಪ್ ಮಾಡಬಹುದಾಗಿದ್ದು, ಫೋಟೋ ಕಳುಹಿಸಬೇಕಾದ ಸಂಖ್ಯೆ: 8277988460