ಹಳಿಯಾಳ: ನಗರದಲ್ಲಿ ಬೀಡಾಡಿ ಹಂದಿಗಳು ಹೆಚ್ಚಾಗಿರುವ ಹಿನ್ನಲೆ ಪುರಸಭೆಯಿಂದ ಅವನ್ನು ನಿಯಂತ್ರಿಸಲು ಯೋಜನೆ ರೂಪಿಸಲಾಗಿದೆ. ಆದರೆ, ಹಂದಿ ಹಿಡಿಯುವ ಕಾರ್ಯಾಚರಣೆಗೆ ಕೆಲವರು ಅಡ್ಡಿಪಡಿಸಿದ್ದಾರೆ.
ಬಿಡಾಡಿ ಹಂದಿಗಳ ನಿಗ್ರಹಕ್ಕಾಗಿ ಅಕ್ಟೊಬರ್ 20ರಂದು ಪುರಸಭೆ ವಿಶೇಷ ಸಭೆ ಆಯೋಜಿಸಿದ್ದು, ಹಂದಿ ಮಾಲಕರಿಗೆ 48 ದಿನಗಳ ಗಡುವು ನೀಡಿತ್ತು. ಅದಾಗಿಯೂ ಹಂದಿ ಸಾಕಣಿಕೆದಾರರು ಬೀದಿ ಬೀದಿಯಲ್ಲಿ ಅಲೆಯುತ್ತಿದ್ದ ಹಂದಿಗಳನ್ನು ತಮ್ಮ ವಶಕ್ಕೆ ಪಡೆದಿರಲಿಲ್ಲ.
ಈ ಹಿನ್ನಲೆ ನ 28ರಂದು ಪುರಸಭೆಯವರು ತುಮಕೂರಿನಿಂದ ಹಂದಿ ಹಿಡಿಯುವವರನ್ನು ಕರೆಯಿಸಿದ್ದರು. ದೇಸಾಯಿಗಲ್ಲಿಯಲ್ಲಿ ಹಂದಿ ಹಿಡಿಯುವ ಕಾರ್ಯಾಚರಣೆ ನಡೆಯುವಾಗ ಕುಮಾರ ಗಂಗಪ್ಪ ಸವದತ್ತಿ, ತರುಣಕುಮಾರ ಸವದತ್ತಿ, ದುರ್ಗಪ್ಪ ಯರನ್ನವರ, ಕಾರ್ತಿಕ ಸವದತ್ತಿ, ರೋಹಿತ್ ಸವದತ್ತಿ ಹಾಗೂ ಇನ್ನಿತರರು ಆಗಮಿಸಿ ಹಂದಿ ಹಿಡಿಯಲು ವಿರೋಧಿಸಿದರು.
ಅದಾಗಿಯೂ ತುಮಕೂರಿನ ಎಸ್ ನರಸಿಂಹರಾಜು ಅವರು ಪುರಸಭೆ ಮುಖ್ಯಾಧಿಕಾರಿ ಅಶೋಕಕುಮಾರ ನಾಳೆನವರ್ ಅವರ ಸೂಚನೆ ಮೇರೆಗೆ ಹಂದಿಗಳನ್ನು ಹಿಡಿಯುತ್ತಿದ್ದರು. ಆಗ ಅವರನ್ನು ತಡೆದ ಐದಾರು ಜನ ಹಂದಿ ಹಿಡಿಯುತ್ತಿದ್ದವರ ಮೇಲೆ ದಾಳಿ ನಡೆಸಿದರು. ನರಸಿಂಹರಾಜು ಅವರಿಗೂ ಹಿಗ್ಗಾಮುಗ್ಗ ಥಳಿಸಿದರು. ತಡೆಯಲು ಬಂದ ಅಶೋಕಕುಮಾರ ಅವರನ್ನು ಸಹ ಬೆದರಿಸಿದರು. ಜೊತಗೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದರು.
ಈ ಎಲ್ಲಾ ಹಿನ್ನಲೆ ಹಂದಿ ಹಿಡಿಯುವ ಕಾರ್ಯಾಚರಣೆಗೆ ಅಡ್ಡಿಪಡಿಸಿದವರ ವಿರುದ್ಧ ಅಶೋಕಕುಮಾರ ನಾಳೆನವರ್ ಪೊಲೀಸ್ ದೂರು ನೀಡಿದ್ದಾರೆ.