ಕುಮಟಾ: ಬೇರೆ ಬೇರೆ ತಾಲೂಕಿಗೆ ಹೋಲಿಸಿದರೆ ಕುಮಟಾದಲ್ಲಿನ ಸರ್ಕಾರಿ ಆಸ್ಪತ್ರೆ ಸ್ವಚ್ಛತೆ ಹಾಗೂ ಸೇವೆಯಲ್ಲಿ ಉತ್ತಮವಾಗಿದೆ. ಆದರೆ, ರೋಗಿಗಳ ಅನುಕೂಲಕ್ಕೆ ತಕ್ಕಂತೆ ವೈದ್ಯರು ಸಿಗುವುದಿಲ್ಲ. `ಲಭ್ಯವಿದ್ದಾರೆ’ ಎಂಬ ಹಣೆಪಟ್ಟಿ ಹೊಂದಿದ ವೈದ್ಯರ ಕೊಠಡಿ ಸಹ ಖಾಲಿ ಖಾಲಿ ಎಂಬ ದೂರು ಕೇಳಿ ಬಂದಿದೆ.
ಗುರುವಾರ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ್ ಕುಮಟಾದ ಸರಕಾರಿ ಆಸ್ಪತ್ರೆಗೆ ಹೋಗಿದ್ದರು. ಆ ಆಸ್ಪತ್ರೆಯಲ್ಲಿನ 5 ವೈದ್ಯರು ಈ ದಿನ ರಜೆಯಲ್ಲಿದ್ದರು. `ಲಭ್ಯವಿದ್ದಾರೆ’ ಎಂಬ ಬೋರ್ಡಿನ ಜೊತೆ ಹೆಸರು ಹೊಂದಿದ ವೈದ್ಯರೊಬ್ಬರು 12ಗಂಟೆಗೆ ಬಂದು 3 ಗಂಟೆಗೆ ಮರಳಿದರು. ಇದರಿಂದ ರೋಗಿಗಳು ಸಮಸ್ಯೆ ಅನುಭವಿಸಿದರು.
`ವೈದ್ಯರನ್ನು ಭೇಟಿ ಮಾಡಲು ರೋಗಿಗಳು ದಿನವಿಡೀ ಕಾಯುತ್ತಿದ್ದಾರೆ. ಲಭ್ಯವಿರುವ ವೈದ್ಯರು ಸಮಯಕ್ಕೆ ಸರಿಯಾಗಿ ಬಂದರೆ ಅನುಕೂಲ. ವೈದ್ಯರು ರಜೆ ಮೇಲಿದ್ದರೆ ಆ ಬಗ್ಗೆಯೂ ಸ್ಪಷ್ಠವಾಗಿ ನಾಮಫಲಕ ಅಳವಡಿಸಬೇಕು’ ಎಂದು ಆಗ್ನೇಲ್ ರೋಡ್ರಿಗ್ಸ್ ಆಗ್ರಹಿಸಿದರು. ಈ ಬಗ್ಗೆ ಡಿಎಚ್‌ಓ ಡಾ ನೀರಜ್ ಅವರಿಗೂ ಫೋನ್ ಮಾಡಿ ಮಾಹಿತಿ ನೀಡಿರುವುದಾಗಿ ಅವರು ಹೇಳಿದರು.
`ಈ ಅವಧಿಯಲ್ಲಿ ಎಲುಬು ಹಾಗೂ ಹಲ್ಲಿನ ಡಾಕ್ಟರ್ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿತು’ ಎಂದವರು ವಿವರಿಸಿದರು.




