ಯಲ್ಲಾಪುರ: ವಿವಿಧ ಅಪರಾಧ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದ ಬಗೆ ಬಗೆಯ ವಾಹನಗಳನ್ನು ಪೊಲೀಸರು ಹರಾಜು ಹಾಕಿದ್ದಾರೆ. ಓಡಾಡುವ ಸ್ಥಿತಿಯಲ್ಲಿದ್ದ 8 ವಾಹನಗಳು ಸರ್ಕಾರ ನಿಗದಿಪಡಿಸಿದ ಬೆಲೆಗಿಂತಲೂ ದುಪ್ಪಟ್ಟು ಬೆಲೆಗೆ ಈ ವಾಹನಗಳು ಮಾರಾಟವಾಗಿದೆ.
8 ಸಾವಿರ ರೂಪಾಯಿಯ ಬೈಕಿನಿಂದ 65 ಸಾವಿರ ರೂಪಾಯಿಯ ಕಾರಿನವರೆಗೂ ಸಾರಿಗೆ ಅಧಿಕಾರಿಗಳು ದರ ನಮೂದಿಸಿದ್ದರು. ಹುಬ್ಬಳ್ಳಿ-ದಾವಣಗೆರೆ ಭಾಗದಿಂದ ಬಂದ ಜನ ಹೆಚ್ಚಿನ ದರ ಕೂಗಿ ಆ ವಾಹನಗಳ ಹಕ್ಕು ಪಡೆದರು. ಸ್ಥಳೀಯರು ಸಹ ಉತ್ಸಾಹದಿಂದ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. 1.97 ಲಕ್ಷ ರೂಪಾಯಿಗೆ ಎಂಟು ವಾಹನಗಳು ಮಾರಾಟವಾದವು.
ರಾಯಲ್ ಎನ್ ಫಿಲ್ಡ್ ಸೇರಿ ವಿವಿಧ ಬೈಕುಗಳನ್ನು ಪೈಪೋಟಿಗೆ ಬಿದ್ದು ಸವಾಲು ಕೂಗಿದರು. 17 ವಾಹನಗಳು ಗುಜುರಿ ಸೇರಿದ್ದು, ಪ್ರತಿ ಕೆಜಿಗೆ 30.60 ಪೈಸೆ ದರದಲ್ಲಿ ಅದನ್ನು ವ್ಯಾಪಾರಿಗಳು ಖರೀದಿಸಿದರು. ಗುಜುರಿ ವಾಹನಗಳನ್ನು ತೂಕ ಮಾಡಿ ನಂತರ ಗರಿಷ್ಠ ಸವಾಲು ಕೂಗಿದವರಿಗೆ ಅದನ್ನು ಹಸ್ತಾಂತರಿಸಲಾಗುತ್ತದೆ.



