ಬಿಜೆಪಿಯಲ್ಲಿನ ಭಿನ್ನಮತ, ಗುಂಪುಗಾರಿಕೆ ಹಾಗೂ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ್ ನಿರಂತರ ವಾಗ್ದಾಳಿ ನಡೆಸುತ್ತಿರುವುದು ಪಕ್ಷದ ವರಿಷ್ಠರ ಇರುಸು-ಮುರುಸಿಗೆ ಕಾರಣವಾಗಿದೆ. ನಾಯಕತ್ವ ಬದಲಾವಣೆ ವಿಷಯದ ಬಗ್ಗೆ ನಡೆದ ಕಾರ್ಯಕರ್ತರ ಚರ್ಚೆಯಲ್ಲಿ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಹೆಸರು ಮುನ್ನಲೆಗೆ ಬಂದಿದ್ದು, `ಅವರಿಗೆ ಅಧಿಕಾರ ನೀಡಿದಲ್ಲಿ ಎಲ್ಲರನ್ನು ಸರಿದೂಗಿಸಿಕೊಂಡು ಹೋಗಲಿದ್ದಾರೆ’ ಎಂಬ ಮಾತಿಗೆ ಎಲ್ಲರೂ ತಲೆಯಾಡಿಸುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಅವರ ಮಕ್ಕಳ ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಪದೇ ಪದೇ ಮಾತನಾಡುತ್ತಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಯತ್ನಾಳ್ ಹಾಗೂ ಯಡಿಯೂರಪ್ಪ ಬಣ ಬಡಿದಾಟ ಹಾದಿ-ಬೀದಿರಂಪವಾದ ಬೆನ್ನಲ್ಲೇ ರಾಜಕೀಯ ಪಡಸಾಲೆಯಲ್ಲಿ ಅನಂತಕುಮಾರ್ ಹೆಗಡೆ ಹೆಸರು ಕೇಳಿಬರುತ್ತಿದೆ. ರಾಜ್ಯ ಬಿಜೆಪಿಯ ಒಳಜಗಳ ಶಮನಕ್ಕೆ ಹೈಕಮಾಂಡ್ ಮದ್ದರಿಯಲು ಮುಂದಾಗಿದೆ. ಆದರೆ ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿರುವ ಚರ್ಚೆಯಲ್ಲಿ ಅನಂತಕುಮಾರ ಹೆಸರು ಸದ್ದು ಮಾಡುತ್ತಿದೆ. `ಅವ್ರ್ ಬಿಟ್.. ಇವ್ರ್ ಬಿಟ್.. ಇನ್ನೊಬ್ಬರಿಗೆ ಮಣೆ ಹಾಕಿದರೆ ಈ ಬಣ ಕಚ್ಚಾಟಕ್ಕೆ ಇತೀಶ್ರಿ ಹಾಡಲು ಸಾಧ್ಯ’ ಎಂಬುದು ಮೂಲ ಬಿಜೆಪಿಗರ ಅಭಿಪ್ರಾಯ. ಅವರೆಲ್ಲರೂ ಆಶಯವೂ ಅದೇ ಆಗಿದೆ. ಅನಂತಕುಮಾರ ಹೆಗಡೆ ಅವರಿಗೆ ಜವಾಬ್ದರಿವಹಿಸಿದಲ್ಲಿ ಪ್ರಭಲ ಹಿಂದುತ್ವವಾದಿ, ಸತತ ಗೆಲವು ಕಂಡ ನಾಯಕನ್ನು ನಿರ್ಲಕ್ಷಿಸಿದ ಆರೋಪದಿಂದಲೂ ಬಿಜೆಪಿ ಮುಕ್ತವಾಗಲಿದೆ.
ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕರಾಗಿ ಯಡಿಯೂರಪ್ಪ ಅವರು ಹಿಡಿತ ಸಾಧಿಸಿದ ನಂತರ ಬೆದರಿದ್ದ ಕೇಂದ್ರ ಬಿಜೆಪಿ, ಯಡ್ಡಿಯೂರಪ್ಪ ನಿಯಂತ್ರಣಕ್ಕೆ ಗಟ್ಟಿಯಾಗಿ ಮಾತನಾಡುವ ಕೆಲ ನಾಯಕರನ್ನು ಮುನ್ನೆಲೆಗೆ ತಂದಿತ್ತು. ಆ ಪಟ್ಟಿಯಲ್ಲಿ ಬಸವನಗೌಡ ಯತ್ನಾಳ್ ಸಹ ಇದ್ದರು. ಹೀಗಾಗಿ ವಿಜಯೇಂದ್ರ ತಂಡದವರ ವಿರುದ್ಧ ಯತ್ನಾಳ್ ಬಹಿರಂಗವಾಗಿ ಬುಸುಗುಟ್ಟಿದರೂ ಅಷ್ಟಾಗಿ ಹೈಕಮಾಂಡ್ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಬಿಜೆಪಿಗೆ ಇದೀಗ ಯತ್ನಾಳ್ ಹಾಗೂ ಯಡಿಯೂರಪ್ಪ ವಿಷಯದಲ್ಲಿ ತಾವೇ ಸಾಕಿದ ಗಿಣಿ ಹದ್ದಾಗಿ ಕುಕ್ಕುತ್ತಿರುವುದು ದೊಡ್ಡ ತಲೆನೋವಾಗಿದೆ. `ಒಂದೆಡೆ ಯತ್ನಾಳ್ ಬಾಯಿಯೂ ಮುಚ್ಚಿಸಬೇಕು. ಇನ್ನೊಂದೆಡೆ ಯಡಿಯೂರಪ್ಪ ಬಣದವರು ಜೋರಾಗದಂತೆ ನೋಡಿಕೊಳ್ಳಬೇಕು’ ಎಂಬುದು ಬಿಜೆಪಿ ಹೈ ಕಮಾಂಡ್ ಮುಂದಿರುವ ಸವಾಲು. ಈ ಸವಾಲನ್ನು ಸರಿದೂಗಿಸಿಕೊಂಡು ಹೋಗುವ ನಾಯಕ ಅಂದರೆ ಅನಂತಕುಮಾರ ಹೆಗಡೆ!
ಲೋಕಸಭಾ ಚುನಾವಣಾ ಆಕಾಂಕ್ಷಿಯಾಗಿದ್ದ ಅನಂತಕುಮಾರ ಹೆಗಡೆ ಅವರಿಗೆ ಬಿಜೆಪಿ ಟಿಕೆಟ್ ಕೊಡದೇ ಅನ್ಯಾಯ ಮಾಡಿದ ಎಂಬ ಆರೋಪವಿದ್ದು, ಅದನ್ನು ಹೋಗಲಾಡಿಸಲು ಸಹ ಇದು ಸಕಾಲ. ಅನಂತಕುಮಾರ ಹೆಗಡೆ ರಾಜ್ಯ ಚುಕ್ಕಾಣಿ ಹಿಡಿದರೆ ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡದು ಸಾಧಿಸಿದ ಹಿರಿಮೆ ಬಿಜೆಪಿಗೆ. ಕಾಂಗ್ರೆಸ್ಸಿಗೆ ಸಮರ್ಥವಾಗಿ ಠಕ್ಕರ್ ಕೊಡುವ ಎದೆಗಾರಿಕೆ ತೋರಿಸುವ ಶಕ್ತಿ ಅನಂತಕುಮಾರ ಹೆಗಡೆ ಅವರಿಗಿದ್ದು, ರಾಜ್ಯ ಬಿಜೆಪಿಗೆ ಅವರ ಅಗತ್ಯ ಹೆಚ್ಚಿದೆ ಎಂಬುದು ಅನೇಕ ಬಿಜೆಪಿಗರ ಮನದಾಳ. ಅನಂತಕುಮಾರ ಹೆಗಡೆ ಅವರಿಗಿರುವ ವರ್ಚಸ್ಸು ರಾಜ್ಯ ಬಿಜೆಪಿಗೆ ಶಕ್ತಿ ಕೊಡಲಿದೆ. ಹಿಂದೂ ಕಾರ್ಯಕರ್ತರ ದೊಡ್ಡ ಪಡೆ ಅನಂತಕುಮಾರ ಹೆಗಡೆ ಅವರ ಜೊತೆ ಬಿಜೆಪಿಗೆ ಬೆನ್ನಿಗೆ ನಿಲ್ಲುವ ಸಾಧ್ಯತೆಗಳಿದೆ. ಹೀಗಾಗಿ `ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಇರುವ ಮಾರ್ಗ ಇದೊಂದೆ’ ಎನ್ನುವುದು ಬಿಜೆಪಿ ಕಾರ್ಯಕರ್ತರ ಇಂಗಿತ.
ಇಷ್ಟೊAದು ಚರ್ಚೆ ನಡೆಯುತ್ತಿದ್ದರೂ ಅನಂತಕುಮಾರ ಹೆಗಡೆಯವರಿಗೆ `ರಾಜ್ಯ ರಾಜಕಾರಣಕ್ಕೆ ಬನ್ನಿ’ ಎಂದು ಅಧಿಕೃತ ಆಹ್ವಾನ ಬಂದ ಹಾಗಿಲ್ಲ. ಆಗ, `ನೀವೇ ಲೋಕಸಭೆಗೆ ನಿಲ್ಲಬೇಕು’ ಎಂದು ಗುಂಪು ಗುಂಪಾಗಿ ಅವರ ಮನೆಗೆ ಹೋಗಿ ಒತ್ತಾಯ ಮಾಡಿದ್ದ ಕಾರ್ಯಕರ್ತರು ಸಹ ಇದೀಗ ಅವರನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ನೇರವಾಗಿ ಹೇಳಿಕೊಳ್ಳುವ ಧೈರ್ಯ ಮಾಡಿಲ್ಲ.



