ಭಟ್ಕಳ: ಮುರುಡೇಶ್ವರ ದೇವಾಲಯದ ಹೆಸರಿನಲ್ಲಿ ವಂಚಕರು ನಿಷೇಧಿತ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ. ದೇವರ ಮೇಲಿನ ಭಕ್ತಿ ಹಾಗೂ ಕಾಸಿನ ಮೇಲಿನ ಮೋಹದಿಂದಾಗಿ ಅನೇಕರು ಆನ್‌ಲೈನ್ ಮೂಲಕ ಈ ಲಾಟರಿ ಟಿಕೆಟ್ ಪಡೆದು ಮೋಸ ಹೋಗಿದ್ದಾರೆ!
ಮುರುಡೇಶ್ವರದ ಈಶ್ವರ ಪ್ರತಿಮೆಯ ಚಿತ್ರಣದೊಂದಿಗೆ `ಶ್ರೀ ಮುರುಡೇಶ್ವರ ದೇವಸ್ಥಾನ ಅದೃಷ್ಟ ಡ್ರಾ’ ಎಂಬ ಹೆಸರಿನಲ್ಲಿ ಲಾಟರಿ ಮಾರಾಟ ನಡೆಯುತ್ತಿದೆ. 299ರೂಪಾಯಿಗೆ ಈ ಲಾಟರಿ ಮಾರಾಟ ಮಾಡುವ ದುಷ್ಕರ್ಮಿಗಳು ಕ್ಯೂಆರ್ ಕೋಡ್ ಸ್ಕಾನರ್ ಕಳುಹಿಸಿ ಹಣ ಪಡೆಯುತ್ತಿದ್ದಾರೆ. ಹಣ ಪಡೆದವರ ಹೆಸರು, ವಿಳಾಸದ ಜೊತೆ ಟಿಕೆಟ್’ನ್ನು ವಾಟ್ಸಪ್ ಮೂಲಕ ರವಾನಿಸುತ್ತಿದ್ದಾರೆ. ಮುರುಡೇಶ್ವರ ಹೆಸರಿನಲ್ಲಿ ಲಾಟರಿ ಕಾಣಿಸಿದ್ದರಿಂದ ಜನ ಮುಗಿಬಿದ್ದು ಇದನ್ನು ಖರೀದಿಸುತ್ತಿದ್ದು, ಮೋಸ ಹೋದವರ ಸಂಖ್ಯೆ ಲೆಕ್ಕಕ್ಕೆ ಸಿಗುತ್ತಿಲ್ಲ!
ಈ ಲಾಟರಿ ಚೀಟಿಯಲ್ಲಿ ಕಾರು, ಟಿಪ್ಪರ್, ಜೆಸಿಬಿ, ಚಿನ್ನ, ಬೈಕ್ ಸೇರಿ 501 ಬಹುಮಾನಗಳಿರುವ ಬಗ್ಗೆ ನಮೂದಿಸಲಾಗಿದೆ. `ಹೋದರೆ 299ರೂ ದೇವರ ಪಾಲು. ಬಂದರೆ ಬಂಪರ್ ಬಹುಮಾನ’ ಎಂಬ ನಿಟ್ಟಿನಲ್ಲಿ ಜನ ಹಣ ಪಾವತಿಸಿ ನಕಲಿ ಲಾಟರಿ ಖರೀದಿಸುತ್ತಿದ್ದಾರೆ.
ಸಿದ್ದಾಪುರದ ವ್ಯಕ್ತಿಯೊಬ್ಬರು ಈ ಲಾಟರಿ ಟಿಕೆಟ್ ಖರೀದಿಸಿದ ನಂತರ ಅವರಿಗೆ `ಲಾಟರಿಯಲ್ಲಿ ಬೈಕ್ ಸಿಕ್ಕಿದೆ. ಬೈಕ್ ಬಿಡಿಸಿಕೊಳ್ಳಲು ಮತ್ತೆ 4500ರೂ ಹಣ ಪಾವತಿಸಬೇಕು’ ಎಂದು ದುಷ್ಕರ್ಮಿಗಳು ಬೇಡಿಕೆ ಇಟ್ಟಿದ್ದಾರೆ. ಇದರಿಂದ ಎಚ್ಚೆತ್ತ ಆ ವ್ಯಕ್ತಿ ಎರಡನೇ ಬಾರಿ ಹಣ ಪಾವತಿಸದೇ ತಪ್ಪಿಸಿಕೊಂಡಿದ್ದಾರೆ.




