ಅoಕೋಲಾ: ಅಚವೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯಾಗಿರುವ ವಿಠ್ಠಲ ಬಾಂದಿ ಅವರು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದ ದೇವರ ಮೂರ್ತಿಗಳನ್ನು ಕಳ್ಳರು ದೋಚಿದ್ದು, ಆ ಕಳ್ಳರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಳ್ಳತನ ಪ್ರಕರಣದಲ್ಲಿ ವಶಕ್ಕೆ ಪಡೆದಿರುವ ಮೂರ್ತಿಗಳೇ ಮುಖ್ಯ ಸಾಕ್ಷಿಯಾಗಿದ್ದು, 16 ಮೂರ್ತಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಲಿದ್ದಾರೆ. ಅನಾಧಿಕಾಲದಿಂದಲೂ ಭಕ್ತಿಯಿಂದ ಪೂಜಿಸಲ್ಪಡುತ್ತಿದ್ದ ಮೂರ್ತಿಗಳು ಕಳ್ಳರ ಕಾಟದಿಂದ ಪೂಜೆ ತಪ್ಪಿಸಿಕೊಂಡಿದೆ!
ಕೆಪಿಸಿ ನೌಕರ ಜಿ ಶ್ರೀನಿವಾಸ ಗುರುಸ್ವಾಮಿ ವಿಗ್ರಹ ಕಳ್ಳತನ ಸಂಘದ ರೂವಾರಿ. ಹಿಲ್ಲೂರಿನ ತಿಂಗಳಬೈಲಿನಲ್ಲಿರುವ ವಿಠ್ಠಲ ಬಾಂದಿ ಅವರ ಮನೆಯಲ್ಲಿ ಹಲವು ಬಗೆಯ ವಿಗ್ರಹಗಳನ್ನು ನೋಡಿದ್ದ ಶ್ರೀನಿವಾಸ ಗುರುಸ್ವಾಮಿ ಆ ಮೂರ್ತಿ ಕದಿಯಲು ತಂಡ ರಚಿಸಿದ್ದ. ಚಿತ್ತಾಕುಲದಲ್ಲಿ ವಾಸಿಸುವ ಮಿಶನ್ ಕೆಲಸ ಮಾಡುವ ಅಶೋಕ ಬಂಡಿವಡ್ಡರ್, ರೆಡಿಯಂ ಕಟಿಂಗ್ ಕೆಲಸ ಮಾಡುವ ಮೈಸೂರಿನ ಪುರಖಾನ್ ಜೊತೆ ಕದ್ರಾ ರಾಜೀವನಗರದ ಮೌಲಾಲಿ ಮಹ್ಮದ್, ಮುಬಾರಕ್ ಶೇಖ್, ಎ ಎಸ್ ಶೇಖ್ ಜೊತೆ ಸೇರಿ ವಿಠ್ಠಲ ಬಾಂದಿ ಅವರ ಮನೆಗೆ ನುಗ್ಗಿದ್ದ.
ಅಲ್ಲಿರುವ ಹಲವು ಮೂರ್ತಿಗಳ ಪೈಕಿ 16 ವಿಗ್ರಹಗಳನ್ನು ಈ ಎಲ್ಲರೂ ಸೇರಿ ಕದ್ದಿದ್ದರು. ಮನೆ ಸದಸ್ಯರೆಲ್ಲರೂ ಮಲಗಿರುವಾಗಲೇ ಅವರು ಒಳಗೆ ನುಸುಳಿದ್ದರು. ಒಂಚೂರು ಸದ್ದು ಮಾಡದೇ ದೇವರಮನೆಯಲ್ಲಿದ್ದ ಮೂರ್ತಿಗಳನ್ನು ಅಪಹರಿಸಿದ್ದರು. ಸೋಮವಾರ ನಸುಕಿನಲ್ಲಿ ಕದ್ದ ದೇವರನ್ನು ಮೂರು ಕಾರು ಹಾಗೂ ಒಂದು ಸ್ಕೂಟಿ ಮೂಲಕ ಬೇರೆಡೆ ಸಾಗಿಸಿದ್ದರು. ಮನೆಯಲ್ಲಿದ್ದ ದೇವರು ಕಾಣೆಯಾದ ಬಗ್ಗೆ ವಿಠ್ಠಲ ಬಾಂದಿ ಪೊಲೀಸ್ ದೂರು ನೀಡಿದ್ದು, ದೇವರನ್ನು ಕದ್ದ ಪ್ರಕರಣದ ಬಗ್ಗೆ ಪೊಲೀಸರು ಜಾಲಾಡಿದರು.
ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ ಜಗದೀಶ್ ಅವರಿಂದ ಪ್ರಕರಣದ ಬಗ್ಗೆ ಮಾಹಿತಿ ಪಡೆದರು. ಪೊಲೀಸ್ ಉಪಾಧ್ಯಕ್ಷ ಗಿರೀಶ ಎಸ್ ವಿ ಕಳ್ಳರ ಪತ್ತೆಗೆ ತಂಡ ರಚಿಸಿದರು. ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಅವರು ತನಿಖಾಧಿಕಾರಿ ಜಯಶ್ರೀ ಪ್ರಭಾಕರ ಅವರ ಜೊತೆ ಚರ್ಚಿಸಿದರು. ಪೊಲೀಸ್ ಉಪನಿರೀಕ್ಷಕ ಉದ್ದಪ್ಪ ದರನೆಪ್ಪನವರ್, ಪೊಲೀಸ್ ಸಿಬ್ಬಂದಿ ಮಹಾದೇವ ಸಿದ್ದಿ, ಅಂಬರೀಶ ನಾಯ್ಕ, ಪ್ರಶಾಂತ ನಾಯ್ಕ, ಶ್ರೀಕಾಂತ ಕಡಬರ, ಮನೋಜ ಡಿ, ಆಸಿಫ್ ಆರ್ ಕೆ, ರೋಹಿದಾಸ ದೇವಾಡಿಗ, ಶಿವಾನಂದ ನಾಗರದಿನ್ನಿ ಪ್ರಕರಣದ ಬೆನ್ನು ಬಿದ್ದರು. ಚೀಪ್ ಚಾಲಕ ಸತೀಶ ನಾಯ್ಕ ಸಹ ವಿವಿಧ ಆಯಾಮಗಳಿಂದ ಕಳ್ಳತನದ ಬಗ್ಗೆ ಯೋಚಿಸುತ್ತಿದ್ದರು.
ಈ ಎಲ್ಲರೂ ಸೇರಿ ಮೊದಲು ಕೆಪಿಸಿ ನೌಕರ ಶ್ರೀನಿವಾಸ ಗುರುಸ್ವಾಮಿಯನ್ನು ವಶಕ್ಕೆ ಪಡೆದು, ಆತ ನೀಡಿದ ಮಾಹಿತಿ ಪ್ರಕಾರ ಉಳಿದ ಆರೋಪಿಗಳನ್ನು ಬಂಧಿಸಿದರು. ಕಾಣೆಯಾದ ದೇವರನ್ನು ಸಹ ಪತ್ತೆ ಮಾಡಿದರು. ಈ ಕಳ್ಳರು ದೇವರ ವಿಗ್ರಹ ಹಾಗೂ ಹಳೆಯ ಮೊಬೈಲ್ ಹೊರತುಪಡಿಸಿ ಮನೆಯಲ್ಲಿದ್ದ ಬೇರೆ ಯಾವ ವಸ್ತುವನ್ನು ಮುಟ್ಟಿಲ್ಲ. `ಕಳ್ಳರು ಹೇಗೆ ಮನೆಯೊಳಗೆ ಬಂದರು?’ ಎಂಬುದು ವಿಠ್ಠಲ ಬಾಂದಿ ಅವರ ಕುಟುಂಬದವರಿಗೆ ಗೊತ್ತಾಗಿಲ್ಲ. `ಚಿನ್ನದ ವಿಗ್ರಹ ಎಂದು ತಿಳಿದು ಅವರು ಹಿತ್ತಾಳೆ ಕದ್ದಿರಬಹುದು’ ಎಂದು ವಿಠ್ಠಲ ಬಾಂದಿ ಅನುಮಾನ ವ್ಯಕ್ತಪಡಿಸಿದರು.




