ಕುಮಟಾ: ಹಳದಿಪುರದ ಸಾಲಿಕೆರಿ ಗ್ರಾಮದ ಹೆದ್ದಾರಿ ಅಂಚಿನ ಪ್ರದೇಶ ಗಬ್ಬೆದ್ದಿದೆ. ಬೇರೆ ಬೇರೆ ಊರಿನ ಅಲೆಮಾರಿಗಳು ಇಲ್ಲಿ ಗುಡಿಸಲು ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿದ್ದು, ಕೊಳಚೆ ಪ್ರದೇಶದಿಂದ ಹರಡುವ ರೋಗಗಳ ಬಗ್ಗೆ ಅವರಿಗೆ ಅರಿವಿಲ್ಲ. ತ್ಯಾಜ್ಯ ನಿರ್ವಹಣೆಗಾಗಿ ತೆರಿಗೆ ಸಂಗ್ರಹಿಸುವ ಸ್ಥಳೀಯ ಆಡಳಿತ ಸಹ ಸ್ವಚ್ಛತಾ ಕಾರ್ಯ ನಡೆಸುತ್ತಿಲ್ಲ.
ಮಂಗಳವಾರ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಈ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಇಲ್ಲಿ ತಲೆ ಕೂದಲು ಮಾರುವವರು, ಕಬ್ಬಿಣ-ಪ್ಲಾಸ್ಟಿಕ್ ಆರಿಸುವವರು ಸೇರಿ ಬಗೆ ಬಗೆಯ ವೃತ್ತಿ ನಡೆಸುವವರಿದ್ದು ಅವರನ್ನು ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಮಾತನಾಡಿಸಿದರು. ಈ ವೇಳೆ ಶಿರಸಿ, ಮುಂಡಗೋಡು ಹಾಗೂ ಹಳಿಯಾಳ ಭಾಗದ ಜನ ಇಲ್ಲಿ ವಾಸಿಸುತ್ತಿರುವುದು ಗೊತ್ತಾಗಿದೆ. ಒಂದು ಊರಿನಿಂದ ಮತ್ತೊಂದು ಊರಿಗೆ ಸಂಚರಿಸುವ ಅಲೆಮಾರಿಗಳು ಕೆಲ ದಿನಗಳ ಕಾಲ ಹೆದ್ದಾರಿ ಬದಿ ಉಳಿದು ಅಲ್ಲಿ ಕೆಲಸ ಮುಗಿದ ನಂತರ ಬೇರೆ ಕಡೆ ಸಂಚರಿಸುತ್ತಾರೆ.
ಈ ಅಲೆಮಾರಿಗಳು ವಾಸವಾಗಿರುವ ಪ್ರದೇಶದ ಹೊಂಡದಲ್ಲಿ ಕಸ ತುಂಬಿದೆ. ಅಲ್ಲಿಯೇ ಗಲೀಜು ನೀರು ನಿಂತಿರುವುದರಿoದ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಅಲ್ಲಿ ವಾಸವಾಗಿರುವ ಜನ ಸಹ ಇನ್ನಷ್ಟು ಗಲೀಜು ಮಾಡುತ್ತಿದ್ದಾರೆ. ಆದರೆ, ಗ್ರಾಮ ಪಂಚಾಯತದವರು ತಮ್ಮ ಸ್ವಚ್ಛತಾ ವಾಹಿನಿ ವಾಹನವನ್ನು ಇಲ್ಲಿ ಓಡಿಸುತ್ತಿಲ್ಲ. ಅಲೆಮಾರಿಗಳಿಗೆ ಸ್ವಚ್ಛತೆ ಕಾಪಾಡುವಂತೆ ಅರಿವು ಮೂಡಿಸುತ್ತಿಲ್ಲ. ಇದರಿಂದ ಇತರರಿಗೂ ರೋಗದ ಆತಂಕ ಎದುರಾಗಿದೆ.
ಇನ್ನೂ ಆರೋಗ್ಯ ಇಲಾಖೆಯವರು ಕಾಲರಾ, ಮಂಗನ ಕಾಯಿಲೆ, ಡೆಂಗ್ಯು ವಿರುದ್ಧ ಜಾಗೃತಿಗಾಗಿ ಮನೆ ಮನೆಗೆ ಆಶಾ ಕಾರ್ಯಕರ್ತರನ್ನು ಕಳುಹಿಸುತ್ತಾರೆ. ಆದರೆ, ಈ ಅಲೆಮಾರಿಗಳ ಬಳಿ ಯಾರೂ ಬಂದಿಲ್ಲ. `ಕಳೆದ ಒಂದು ವರ್ಷದಿಂದ ಇಲ್ಲಿ ಬಿಡಾರ ಕಟ್ಟಿಕೊಂಡು ವಾಸವಾಗಿದ್ದೇವೆ. ಯಾವ ಅಧಿಕಾರಿಯೂ ಇಲ್ಲಿ ಬಂದಿಲ್ಲ’ ಎಂದು ಅಲ್ಲಿ ವಾಸಿಸುವ ಪಾರ್ವತಿ ತಿಳಿಸಿದರು.
`ಹೆದ್ದಾರಿ ಅಂಚಿನಲ್ಲಿ ವಾಸಿಸುತ್ತಿರುವ ಅಲೆಮಾರಿಗಳಿಗೂ ಸರ್ಕಾರದ ಯೋಜನೆಗಳು ತಲುಪಬೇಕು. ಅವರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದರ ಜೊತೆ ಈ ಪ್ರದೇಶವನ್ನು ಸ್ವಚ್ಛವಾಗಿರಿಸಲು ಗ್ರಾಮ ಪಂಚಾಯತ ಶ್ರಮಿಸಬೇಕು. ಇಲ್ಲವಾದಲ್ಲಿ ಮೇಲಧಿಕಾರಿಗಳ ಮೊರೆ ಹೋಗುವುದು ಅನಿವಾರ್ಯ’ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ್ ನಾಯ್ಕ ಹೇಳಿದರು.
ಅಲೆಮಾರಿಗಳ ಬದುಕು ಹೇಗೆ? ಈ ಬಗ್ಗೆ ಹೋರಾಟಗಾರರು ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..