ಯಲ್ಲಾಪುರ: ಪ್ರತ್ಯೇಕ ಜಿಲ್ಲೆ ರಚನೆ ವಿಷಯವಾಗಿ ಯಲ್ಲಾಪುರ ತಾಲೂಕಿನ ಜನರ ಅಭಿಪ್ರಾಯ ಸಂಗ್ರಹಕ್ಕಾಗಿ ಜ 21ರ ಬೆಳಗ್ಗೆ 11 ಗಂಟೆಗೆ ಅಡಿಕೆ ಭವನದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ಕ್ಷಮಿಸಿ… ಅದೇ ದಿನ ಮಧ್ಯಾಹ್ನ 3 ಗಂಟೆಗೆ ಸಭೆಯನ್ನು ಮುಂದೂಡಲಾಗಿದೆ!
`ಜ 21ರ ಬೆಳಗ್ಗೆ 11 ಗಂಟೆಗೆ ಸಭೆ ನಡೆಸಲು ನಿರ್ಧರಿಸಲಾಗಿದೆ’ ಎಂದು ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತ ರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು. ಆದರೆ, `ಆ ವೇಳೆಗೆ ಸಭೆ ನಡೆಸಿದರೆ ಆಗಮಿಸಿದವರಿಗೆ ಊಟ ಹಾಕಿಸಬೇಕು’ ಎಂದು ಪತ್ರಕರ್ತ ಶಂಕರ ಭಟ್ಟ ತಾರಿಮಕ್ಕಿ ತಾಕೀತು ಮಾಡಿದರು. `ಊಟ ಹಾಕೋಣ’ ಎಂದು ಅನಂತಮೂರ್ತಿ ಹೆಗಡೆ ಅವರು ಹೇಳಿದರಾದರೂ, ಕೊನೆಗೆ ಉಮೇಶ ಭಾಗ್ವತ ಅವರ ಸಲಹೆ ಮೇರೆಗೆ ಆ ಉಸಾಬರಿ ಬೇಡ ಎಂದು ನಿರ್ಣಯಿಸಿ ಅದೇ ದಿನ ಮಧ್ಯಾಹ್ನ ಸಭೆ ನಡೆಸಲು ನಿರ್ಧರಿಸಲಾಯಿತು.
`ಕದಂಬ ಕನ್ನಡ ಜಿಲ್ಲೆ ರಚನೆಗೆ ಹೋರಾಟಕ್ಕೆ ಎಲ್ಲಾ ಪಕ್ಷದವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಅಧಿವೇಶನದ ವೇಳೆ ನಡೆಸಿದ ಹೋರಾಟದಲ್ಲಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಭಾಗಿಯಾಗಿ ಬೆಂಬಲ ವ್ಯಕ್ತಪಡಿಸಿದರು. ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಹೋರಾಟಗಾರರನ್ನು ಮುಖ್ಯಮಂತ್ರಿಯವರ ಬಳಿ ಕರೆದೊಯ್ಯುವ ಬಗ್ಗೆ ಮಾತನಾಡಿದರು. ಬಿಜೆಪಿ ಹಾಗೂ ಕಾಂಗ್ರೆಸ್ಸಿಗರು ಸೇರಿ ಪಕ್ಷಾತೀತವಾಗಿ ಈ ಹೋರಾಟ ನಡೆಸುತ್ತಿದ್ದೇವೆ’ ಎಂದು ಅನಂತಮೂರ್ತಿ ಹೆಗಡೆ ಹೇಳಿದರು. ಆಗ ಬಿಜೆಪಿಯಿಂದ ಕಾಂಗ್ರೆಸ್ ಸೇರಿ ಮತ್ತೆ ಬಿಜೆಪಿಗೆ ಮರಳಿರುವ ಮಂಚಿಕೇರಿ ರಾಘವೇಂದ್ರ ಭಟ್ಟರು `ಹೌದು.. ಹೌದು’ ಎಂದು ತಲೆ ಅಲ್ಲಾಡಿಸಿದರು.

`ಘಟ್ಟದ ಮೇಲಿನ ತಾಲೂಕುಗಳ ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆ ವಿಭಜನೆ ಅತ್ಯಗತ್ಯ. ಜಿಲ್ಲಾ ಕೇಂದ್ರದ ಬಗ್ಗೆ ಈಗಲೇ ನಿರ್ಣಯ ಬೇಡ. ಎಲ್ಲರೂ ಒಟ್ಟಾಗಿ ಜಿಲ್ಲೆಯ ರಚನೆಗೆ ಪ್ರಯತ್ನಿಸೋಣ. ನಂತರ ಅನುಕೂಲತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಜಿಲ್ಲಾ ಕೇಂದ್ರದ ನಿರ್ಣಯವಾಗಲಿ’ ಎಂದು ಅನಂತಮೂರ್ತಿ ಹೆಗಡೆ ಹೇಳಿದರು. `ಕದಂಬರು ಆಳಿದ ನೆಲ ಇದಾಗಿದ್ದು, ಅವರಿಗೆ ಗೌರವ ಸಲ್ಲಿಸುವ ನೆಲೆಯಲ್ಲಿ ಕದಂಬ ಕನ್ನಡ ಹೆಸರಿನಲ್ಲಿ ಜಿಲ್ಲೆಯಾಗಬೇಕು. ಹೋರಾಡ ತೀವ್ರಗೊಳಿಸಲು ನಿರ್ಧರಿಸಿ, ಎಲ್ಲ ತಾಲೂಕುಗಳಲ್ಲಿ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ. ಪ್ರಮುಖರ ಮನೆ ಮನೆಗೆ ತೆರಳಿ ಜನ ಬೆಂಬಲ ಪಡೆಯಲಾಗುತ್ತಿದೆ’ ಎಂದರು.
ಹೋರಾಟ ಸಮಿತಿಯ ವಿ ಎಂ.ಭಟ್ಟ, ಪ್ರಮುಖರಾದ ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ, ಗಣಪತಿ ಬೋಳಗುಡ್ಡೆ, ಪ್ರಸಾದ ಹೆಗಡೆ, ಗಣೇಶ ಹೆಗಡೆ, ಬಾಬು ಬಾಂದೇಕರ್, ರವಿ ದೇವಡಿಗ ಇದ್ದರು.