ಕಾರವಾರ: `ಉತ್ತರ ಕನ್ನಡ ಜಿಲ್ಲೆಯ ಯುವ ಜನತೆಗೆ ಅಗತ್ಯವಿರುವ ಕೌಶಲ್ಯ ತರಬೇತಿ ನೀಡಿ, ಇಲ್ಲಿಯೇ ಉದ್ಯೋಗದ ದಾರಿ ತೋರಬೇಕು. ಅವರಿಗೆ ಉತ್ತಮ ವೇತನವೂ ಸಿಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನಿಸಿ’ ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ ಸೂಚನೆ ನೀಡಿದ್ದಾರೆ.
ಜಿಲ್ಲಾ ಕೌಶಲ್ಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು `ಜಿಲ್ಲೆಯ ಐ ಟಿ ಐ ಕಾಲೇಜುಗಳಲ್ಲಿ ಪ್ರಸ್ತುತ ಉದ್ಯೋಗ ವಲಯಗಳಲ್ಲಿ ಬೇಡಿಕೆ ಇರುವ ಕೋರ್ಸ್ಗಳ ಬಗ್ಗೆ ತರಬೇತಿ ನೀಡಬೇಕು. ಸೀಬರ್ಡ ಒಳಗೊಂಡು ಇತರೆ ಕಂಪನಿಗಳಲ್ಲಿ ಇರುವ ಉದ್ಯೋಗಗಳ ಕುರಿತು ಚರ್ಚೆ ನಡೆಸಿ ಸ್ಥಳೀಯರಿಗೆ ಅದಕ್ಕೆ ತಕ್ಕ ತರಬೇತಿ ನೀಡಬೇಕು’ ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಇದುವರೆಗೆ ನಡೆದಿರುವ ಉದ್ಯೋಗ ಮೇಳದಲ್ಲಿ ಉದ್ಯೋಗ ಪಡೆದಿರುವ ಯುವಕರ ವಿವರಗಳನ್ನು ನೀಡುವಂತೆ ಸೂಚಿಸಿದರು. `ಮೇಳದಲ್ಲಿ ಉದ್ಯೋಗ ಪಡೆದಿರುವ ಯುವಕರ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಬೇಕು’ ಎಂದು ಹೇಳಿದರು. `ಜನವರಿ 9ರಂದು ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿ, ಜಿಲ್ಲೆಯ ಯುವ ಜನತೆಗೆ ಪ್ರತಿಷ್ಠಿತ ಕಂಪೆನಿಗಳಲ್ಲಿ ಉತ್ತಮ ಉದ್ಯೋಗ ದೊರಕಿಸಲು ಎಲ್ಲಾ ಕ್ರಮ ಜರುಗಿಸಬೇಕು’ ಎಂದರು.
ನಿರುದ್ಯೋಗ ಭತ್ಯೆ
`ಯುವನಿಧಿ ಯೋಜನೆಯಡಿ ನೋಂದಾಯಿಸಿರುವ ಎಲ್ಲಾ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ದೊರೆಯುವಂತೆ ಪರಿಶೀಲನೆ ನಡೆಸಬೇಕು. ಯೋಜನೆಗೆ ಅರ್ಜಿ ಸಲ್ಲಿಸಿ, ಪರಿಶೀಲನಾ ಹಂತದಲ್ಲಿರುವ ಅರ್ಜಿಗಳನ್ನು 10 ದಿನದಲ್ಲಿ ಪೂರ್ಣಗೊಳಿಸಿ ಅರ್ಹ ಎಲ್ಲರಿಗೂ ಯೋಜನೆಯ ಪ್ರಯೋಜನ ದೊರೆಕಿಸಬೇಕು. ಯೋಜನೆಯ ನೆರವು ಪಡೆಯಲು ತಾಂತ್ರಿಕ ತೊಂದರೆಯಿರುವ ಅಭ್ಯರ್ಥಿಗಳ ಬಗ್ಗೆ ಪರಿಶೀಲಿಸಿ ಅವುಗಳನ್ನು ಬಗೆಹರಿಸಬೇಕು. ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ವೆಬ್‌ಸೈಟ್’ನಲ್ಲಿ ಅಳವಡಿಸಲು ಸಮಸ್ಯೆಯಿರುವ ಕಾಲೇಜು ಮತ್ತು ವಿಶ್ವ ವಿದ್ಯಾಲಯದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಸೂಚಿಸಿದರು.
ಪಿ ಎಂ ವಿಶ್ವಕರ್ಮ ಯೋಜನೆ, ಪಿ ಎಂ ಸೂರ್ಯಘರ್ ಮುಫ್ತ ಬಿಜಲಿ ಯೋಜನೆ ಅನುಷ್ಠಾನ, ಡೇ-ನಲ್ಮ್ ಅಡಿಯಲ್ಲಿ ಬರುವ ಪಿಎಂ ಸ್ವನಿಧಿ ಯೋಜನೆಗಳ ಕುರಿತು ಚರ್ಚೆ ನಡೆಯಿತು. ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗಿಸ್, ಜಿಲ್ಲಾ ಕೌಶಲ್ಯಾಭಿವೃಧ್ದಿ ಅಧಿಕಾರಿ ಡಿ ಟಿ ನಾಯ್ಕ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಯಂತ್ ಇದ್ದರು.



