ಹೊನ್ನಾವರ: ಚರ್ಚ ರಸ್ತೆಯ ಪ್ರೆಸ್ ಚಿಕನ್ ಮಳಿಗೆ ಬಳಿ ನಡೆದ ಅಪಘಾತದಲ್ಲಿ ಮೂರು ಜನ ಗಾಯಗೊಂಡಿದ್ದಾರೆ. ವೇಗವಾಗಿ ಬಂದ ಕಾರು ಚಾಲಕ ಮಹಿಳೆಯರಿಬ್ಬರಿಗೆ ತನ್ನ ಕಾರು ಗುದ್ದಿದ್ದು, ನಂತರ ಸ್ಕೂಟಿ ಸವಾರನನ್ನು ನೆಲಕ್ಕೆ ಬೀಳಿಸಿದ್ದಾನೆ.
ಡಿ 23ರ ಸಂಜೆ ಮಾವಿನಕೂರ್ವಾದ ಹನುಮಂತ ಗೌಡ ಹಾಗೂ ನಾಗಪ್ಪ ಗೌಡ ಚರ್ಚ ರೋಡಿನ ಪ್ರೆಸ್ ಚಿಕನ್ ಸೆಂಟರ್ ಬಳಿ ಮಾತನಾಡುತ್ತಿದ್ದರು. ಅದೇ ವೇಳೆ ಮಾವಿನಕೂರ್ವಾ ಅಂಗಡಿಹಿತ್ಲದ ಶಾಂತಿ ಗೌಡ ಹಾಗೂ ನಾಗವೇಣಿ ಗೌಡ ಅಲ್ಲಿ ನಡೆದು ಹೋಗುತ್ತಿದ್ದರು. ತಾರಿಬಾಗಿಲ ಕಡೆ ಹೋಗುತ್ತಿದ್ದ ಕಾರು ಹಿಂದಿನಿAದ ಆ ಇಬ್ಬರು ಮಹಿಳೆಯರಿಗೆ ಗುದ್ದಿತು.
ಅದಾದ ನಂತರ ಹೈವೆ ಸರ್ಕಲ್’ನಿಂದ ತಾರಿಬಾಗಿಲು ಕಡೆ ಹೋಗುತ್ತಿದ್ದ ಕೆಳಗಿನಪಾಲ್ಯದ ರೋಹಿದಾಸ ಮೇಸ್ತ ಸ್ಕೂಟರಿಗೆ ಸಹ ಆ ಕಾರು ಡಿಕ್ಕಿ ಹೊಡೆಯಿತು. ಕಾರು ಗುದ್ದಿದ ರಭಸಕ್ಕೆ ಶಾಂತಿ ಗೌಡ, ನಾಗವೇಣಿ ಗೌಡ ಹಾಗೂ ರೋಹಿದಾಸ ಮೇಸ್ತ ಗಾಯಗೊಂಡರು. ಆಗ, ಅಲ್ಲಿದ್ದ ಹನುಮಂತ ಗೌಡ ಹಾಗೂ ನಾಗಪ್ಪ ಗೌಡ ಗಾಯಗೊಂಡವರನ್ನು ಉಪಚರಿಸಿದರು. ರಿಕ್ಷಾ ಮೂಲಕ ಆ ಮೂವರನ್ನು ಆಸ್ಪತ್ರೆಗೆ ದಾಖಲಿಸಿದರು.
ಗಂಭೀರ ಗಾಯಗೊಂಡಿದ್ದ ಶಾಂತಿ ಗೌಡ ಅವರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದು, ಅವರ ಕುಟುಂಬದವರು ಬೇರೆ ಕಡೆ ಕರೆದೊಯ್ದರು. ಈ ಅಪಘಾತಕ್ಕೆ ಕಾರಣನಾದ ಗದಗದ ಕಾರು ಚಾಲಕ ಹರ್ಷದ್ ಅಹ್ಮದ್ ವಿರುದ್ಧ ನಾಗಪ್ಪ ಗೌಡ ಪೊಲೀಸ್ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ.