ಕುಮಟಾ: ತದಡಿ -ಅಘನಾಶಿನಿ ನಡುವೆ ಸಂಚರಿಸುವ ಬಾರ್ಜಿನಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲ. ನೀರಿನಲ್ಲಿ ಸಂಚರಿಸುವಾಗ ನೀಡಬೇಕಿದ್ದ ಲೈಫ್ ಜಾಕೆಟ್’ನ್ನು ಇಲ್ಲಿ ನೀಡುವುದಿಲ್ಲ.
ಕರ್ನಾಟಕ ಸರ್ಕಾರದ ಬಂದರು ಇಲಾಖೆ ಅಧೀನದಲ್ಲಿ ಈ ಬಾರ್ಜ ಕಾರ್ಯ ನಿರ್ವಹಿಸುತ್ತಿದೆ. ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಇದನ್ನು ಬಂದರು ಇಲಾಖೆ ಬೇರೆಯವರಿಗೆ ವಹಿಸಿದ್ದು, ಗುತ್ತಿಗೆದಾರರು ಪ್ರಯಾಣಿಕರ ಸುರಕ್ಷತೆ ಬಗ್ಗೆ ಕಾಳಜಿವಹಿಸುತ್ತಿಲ್ಲ. ಬಾರ್ಜಿನಲ್ಲಿ ಅತ್ಯಧಿಕ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದು, ಮೊದಲಿಗಿಂತಲೂ ದುಪ್ಪಟ್ಟು ಶುಲ್ಕ ಪಡೆಯುತ್ತಿದ್ದಾರೆ.
ಬಂದರು ಇಲಾಖೆ ದರಪಟ್ಟಿ ಪ್ರಕಾರ ಪ್ರತಿ ಪ್ರಯಾಣಿಕನಿಂದ 5 ರೂ ಹಾಗೂ ವಾಹನಕ್ಕೆ 10 ರೂ ದರ ಪಡೆಯುವಂತೆ ಸೂಚಿಸಲಾಗಿದೆ. ಆದರೆ, ಬಾರ್ಜ ನಡೆಸುವವರು ಪ್ರಯಾಣಿಕರಿಂದ 10ರೂ ಬೈಕ್ ಸವಾರರಿಂದ 20 ರೂ ವಸೂಲಿ ಮಾಡುತ್ತಿದ್ದಾರೆ. ಪ್ರವಾಸಿಗರು ಬಂದರೆ ಗುತ್ತಿಗೆದಾರರಿಗೆ ಹಬ್ಬ. ಸ್ಥಳೀಯರನ್ನು ಹೊರತುಪಡಿಸಿ ಹೊರ ಪ್ರದೇಶದ ಜನ ಬಂದರೂ ಅವರಿಂದ ಇನ್ನೂ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ. ಬುಲೇಟ್ ಸೇರಿ ದೊಡ್ಡ ಬೈಕಿನವರು ಹೆಚ್ಚಿನ ಕಾಸು ಕೊಡದೇ ಬಾರ್ಜ ಏರುವ ಹಾಗಿಲ್ಲ!
ಈ ಬೋಟಿನ ಒಳಭಾಗದಲ್ಲಿ ದರ ಪಟ್ಟಿಯ ನಾಮಫಲಕ ಅಳವಡಿಸಿಲ್ಲ. ಹೀಗಾಗಿ ಹೊರಗಿನಿಂದ ಬಂದವರು ಕೇಳಿದಷ್ಟು ಹಣ ಕೊಡುತ್ತಿದ್ದಾರೆ. ಸ್ಥಳೀಯರು ಪ್ರಶ್ನಿಸಿದರೆ ಬೆದರಿಕೆಗಳು ಸಾಮಾನ್ಯ. ಪೊಲೀಸರು ಸೂಚಿಸಿದರೂ ಗುತ್ತಿಗೆದಾರರು ಅಧಿಕ ಪ್ರಯಾಣಿಕರನ್ನು ಕರೆದೊಯ್ಯುವುದನ್ನು ಬಿಟ್ಟಿಲ್ಲ. ಪ್ರವಾಸಿಗರ ಸುರಕ್ಷತೆಗೂ ಕಾಳಜಿವಹಿಸಿಲ್ಲ. ಇಲ್ಲಿನ ದಬ್ಬಾಳಿಕೆ ಬಗ್ಗೆ ಬಂದರು ಇಲಾಖೆಗೆ ಗೊತ್ತಿಲ್ಲ ಎಂದಲ್ಲ. ಗೊತ್ತಿದ್ದರೂ ಸಹ ಅಲ್ಲಿನ ಅಧಿಕಾರಿಗಳು ಗುತ್ತಿಗೆದಾರರ ಬಳಿ ಕೈ ಒಡ್ಡುವುದರಿಂದ ಮೌನ ಮುರಿದಿಲ್ಲ!